ಕೊಡಗು: ಪ್ರೀತಿಸಿದ ಹುಡುಗನ ಕೈಹಿಡಿದು ಸುಖ ಸಂಸಾರ ನಡೆಸಬೇಕು ಎಂದು ಸಾವಿರಾರು ಕನಸು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವತಿ ಮೂರೇ ದಿನಕ್ಕೆ ಬಾರದಲೋಕಕ್ಕೆ ತೆರಳಿದ್ದಾರೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಕ್ಷತಾ (18) ಮೃತ ನವವಿವಾಹಿತೆ.
ಹೇಮಂತ್ ಮನೆಯವರು ನಮ್ಮ ಮಗಳನ್ನು ಕೊಂದಿದ್ದಾರೆ-ಪೋಷಕರಿಂದ ಆರೋಪ: ಹೊಸಕೋಟೆಯ ದಶರಥ ಹಾಗೂ ಗಿರಿಜಾ ಎಂಬುವವರ ಪುತ್ರ ಹೇಮಂತ್ ಅಕ್ಷತಾಳನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈ ವಿವಾಹಕ್ಕೆ ಜಾತಿ ವಿಚಾರ ಅಡ್ಡ ಬಂದಿತ್ತು. ಹೇಮಂತ್ ಮನೆಯವರು ನಮ್ಮ ಮಗಳನ್ನು ಕೊಂದಿದ್ದಾರೆ ಎಂದು ಮೃತ ಅಕ್ಷತಾಳ ಪೋಷಕರು ಆರೋಪಿಸಿ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಶವದ ಮುಂದೆ ಗೋಳಾಡುತ್ತಿದ್ದಾರೆ.
ಪ್ರಕರಣದ ವಿವರ: ಹೇಮಂತ್ ಮತ್ತು ಅಕ್ಷತಾ ಎರಡು ವರ್ಷಗಳಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಪ್ರೀತಿ ವಿಚಾರವನ್ನು ಮನೆಯಲ್ಲಿ ಹೇಳಿ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಹೇಮಂತ್ ಮನೆಯವರು ಹುಡುಗಿ ಅನ್ಯ ಜಾತಿಗೆ ಸೇರಿದ್ದಾಳೆ ಎಂದು ಮದುವೆಗೆ ನಿಕಾಕರಿಸಿದ್ದರು. ಇತ್ತ ಅಕ್ಷತಾ ಮನೆಯವರು ಕೂಡ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕುಟುಂಬದವರು ಒಪ್ಪದಿದ್ದಾಗ ಇಬ್ಬರು ಮೂರು ದಿನಗಳ ಹಿಂದೆ ದೇವಸ್ಥಾನದಲ್ಲಿ ವಿವಾಹವಾಗಿದ್ದರು.
ವಿವಾಹವಾದ ಬಳಿಕ ಸಂಜೆ ಹೇಮಂತ್ ಮನೆಗೆ ಹೋಗಿದ್ದಾರೆ. ಆದರೆ ಯುವತಿ ಅನ್ಯ ಜಾತಿಗೆ ಸೇರಿದ್ದಾಳೆ. ನಮ್ಮ ಮನೆಗೆ ಬೇಡ ಎಂದು ಹುಡುಗನ ಮನೆಯವರು ಗಲಾಟೆ ಮಾಡಿದ್ದಾರೆ. ಮನೆಯವರ ವಿರೋಧದ ನಡುವೆ ಹೇಮಂತ್ ಅಕ್ಷತಾಳನ್ನು ಮನೆಯಲ್ಲಿ ಇರಿಸಿಕೊಂಡಿದ್ದರಂತೆ. ಅಲ್ಲದೇ ಪೋಷಕರು ಅಕ್ಷತಾಳನ್ನು ನೋಡಲು ಹೋದಾಗ ನಿಮ್ಮ ಹುಡುಗಿಯನ್ನು ಬಿಡುವುದಿಲ್ಲ ಎಂದು ಹೇಮಂತ್ ಮನೆಯವರು ಬೆದರಿಕೆ ಹಾಕಿದ್ದರಂತೆ. ಬಳಿಕ ಮದುವೆಯಾಗಿ ಮೂರೇ ದಿನಕ್ಕೆ ಅಕ್ಷತಾ ಸಾವನ್ನಪ್ಪಿದ್ದಾರೆ. ಅಕ್ಷತಾ ಆರೋಗ್ಯವಾಗಿ ಇದ್ದಳು. ಆಕೆಗೆ ಯಾವುದೇ ರೋಗ ಇರಲಿಲ್ಲ. ಅನ್ಯ ಜಾತಿಗೆ ಸೇರಿದ್ದಾಳೆ ಎಂದು ಹೇಮಂತ್ ಮನೆಯವರು ನನ್ನ ಮಗಳನ್ನು ಕೊಂದಿದ್ದಾರೆ. ಮನೆಯಿಂದ ಆಸ್ಪತ್ರೆಗೆ ಕರೆತರುವಾಗ ಶವ ರಕ್ತಸಿಕ್ತವಾಗಿತ್ತು ಎಂದು ಅಕ್ಷತಾ ಪೋಷಕರು ಆರೋಪ ಮಾಡಿದ್ದಾರೆ. ಅಲ್ಲದೇ ತಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯುತ್ತಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದಾಂಪತ್ಯ ಜೀವನ ಸುಖವಾಗಿರುತ್ತದೆ ಎಂದು ಕನಸು ಕಂಡಿದ್ದ ಯುವತಿ ಸಾವಿನ ಮನೆ ಸೇರಿದ್ದು ಮಾತ್ರ ದುರಂತ. ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ಜೋಡಿ: ತಾನು ಪ್ರೀತಿಸಿದ ಹುಡುಗಿ ತನಗೆ ಸಿಗಲು ಸಾಧ್ಯವಿಲ್ಲ ಎಂದು ತಿಳಿದು ಯುವಕನೋರ್ವ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಯುವಕನು ತನ್ನ ಪ್ರೇಯಸಿಗೆ ತಾಳಿ ಕಟ್ಟಿದ್ದ. ನಂತರ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.
ಇದನ್ನೂ ಓದಿ: ಫಲಿಸದ ಪ್ರೀತಿ: ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ; ಬಾಗಲಕೋಟೆಯಲ್ಲಿ ದುರಂತ ಪ್ರೇಮಕಥೆ!