ಕೊಡಗು: ಮಂಜಿನ ನಗರಿ ಮಡಿಕೇರಿಯ ನವರಾತ್ರಿ ಕೊನೆಯ ದಿನದ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಮಂಜಿನ ನಗರಿ ಮಧುವಣಗಿತ್ತಿಯಂತೆ ಅಲಂಕೃತಗೊಂಡಿದೆ. ನಗರದ 10 ಶಕ್ತಿದೇವತೆಗಳ ಶೋಭಾಯಾತ್ರೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಇದರ ನಡುವೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪ್ರವಾಸಿಗರು ಮಂಜಿನ ನಗರಿಯತ್ತ ಮುಖಮಾಡಿದ್ದು, ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ದಸರಾ ಎಂದಾಕ್ಷಣ ಮೈಸೂರಿನ ಜೊತೆ ನೆನಪಾಗೋ ಮತ್ತೊಂದು ಹೆಸರು ಮಡಿಕೇರಿ. ಮೈಸೂರು ದಸರಾದಲ್ಲಿ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದ್ರೆ ಮಡಿಕೇರಿ ದಸರಾದಲ್ಲಿ ಅಹೋರಾತ್ರಿ ನಡೆಯೋ ದಶ ಮಂಟಪಗಳ ಶೋಭಾಯಾತ್ರೆ ಫೇಮಸ್ ಆಗಿದೆ. ಅಷ್ಟರಮಟ್ಟಿಗೆ ಮಡಿಕೇರಿ ದಸರಾ ಪ್ರಖ್ಯಾತಿ ಪಡೆದಿದೆ. ಕರಗಗಳ ನಗರ ಪ್ರದಕ್ಷಿಣೆ ಬಳಿಕ ಆರಂಭವಾಗುವ ಮಂಜಿನನಗರಿ ಮಡಿಕೇರಿ ದಸರಾದಲ್ಲಿ 9 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. 9ನೇ ದಿನವಾದ ಇಂದು ಅಹೋರಾತ್ರಿ ನಗರದ 10 ಶಕ್ತಿ ದೇವತೆಗಳ ಶೋಭಾಯಾತ್ರೆ ನಡೆಯುವ ಮೂಲಕ ಮಡಿಕೇರಿ ದಸರೆಗೆ ತೆರೆ ಬೀಳುತ್ತದೆ. ಸದ್ಯ ದಶಮಂಟಪಗಳ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ಕಲಾಕೃತಿಗಳಿಗೆ ಫೈನಲ್ ಟಚ್ ಕೊಡೋ ಕಾರ್ಯ ನಡೀತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಮಡಿಕೇರಿ ದಸರಾ ವೀಕ್ಷಣೆಗೆ ದೇಶ-ವಿದೇಶಗಳ ಸಹಸ್ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬಣ್ಣ ಬಣ್ಣದ ದೀಪಗಳಿಂದ ಸ್ವರ್ಗಲೋಕದಂತೆ ಮಡಿಕೇರಿ ಅಲಂಕೃತಗೊಂಡಿದೆ.ಶೋಭಾಯಾತ್ರೆಯಲ್ಲಿ ನಡೆಯೋ ದೇವತೆ ಮತ್ತು ಅಸುರರ ಕಾದಾಟ ಪ್ರವಾಸಿಗರ ಸ್ವರ್ಗ ಮಂಜಿನನಗರಿ ಮಡಿಕೇರಿಯನ್ನು ಅಕ್ಷರಶಃ ದೇವಲೋಕವನ್ನಾಗಿಸಲಿರೋದಂತೂ ಸತ್ಯ.