ನಾಪೋಕ್ಲು/ಮಡಿಕೇರಿ: ಮಡಿಕೇರಿ ತಾಲೂಕಿನ ನಾಪೋಕ್ಲು-ಪಾರಾಣೆ ಸಂಪರ್ಕ ರಸ್ತೆ ದುಸ್ಥಿತಿ ಬಗ್ಗೆ ಈಟಿವಿ ಭಾರತ ವರದಿ ಬಳಿಕ ಎಚ್ಚೆತ್ತ ಗುತ್ತಿಗೆದಾರರು ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ.
ನಾಪೋಕ್ಲು ಮಾರ್ಗವಾಗಿ ವಿರಾಜಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಸ್ಥಳೀಯ ಗುತ್ತಿಗೆದಾರರ ಅವೈಜ್ಞಾನಿಕ ಕೆಲಸದಿಂದ ಗುಂಡಿಗಳು ಬಿದ್ದಿದ್ದು, ಇದರಿಂದ ಪ್ರತಿನಿತ್ಯ ವಾಹನ ಸವಾರರು ಗುಂಡಿ ಬಿದ್ದಿರುವ ರಸ್ತೆಗಳಲ್ಲೇ ಪ್ರಯಾಸದಿಂದ ಸಂಚರಿಸುತ್ತಿದ್ದರು. ಈ ಬಗ್ಗೆ ಈಟಿವಿ ಭಾರತ ''ಗುತ್ತಿಗೆದಾರರ ನಿರ್ಲಕ್ಷ್ಯ ಆರೋಪ... ಹದಗೆಟ್ಟ ರಸ್ತೆಯಿಂದ ಸ್ಥಳೀಯರ ಆಕ್ರೋಶ'' ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಮಾಡಿತ್ತು. ಈ ಹಿನ್ನೆಲೆ ಎಚ್ಚೆತ್ತುಕೊಂಡ ಗುತ್ತಿಗೆದಾರರು ಜೆಸಿಬಿ ಮೂಲಕ ಸೇತುವೆ ಇಕ್ಕೆಲಗಳಲ್ಲಿ ಮಣ್ಣು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.
ಗುತ್ತಿಗೆದಾರರ ನಿರ್ಲಕ್ಷ್ಯ ಆರೋಪ... ಹದಗೆಟ್ಟ ರಸ್ತೆಯಿಂದ ಸ್ಥಳೀಯರ ಆಕ್ರೋಶ
ಹಿಂದೆ ಗುತ್ತಿಗೆದಾರರು ನಿರ್ಮಿಸಿದ್ದ ಸೇತುವೆಯ ಎರಡೂ ಬದಿಗಳಲ್ಲೂ ನೀರು ಹಾದು ಹೋಗಲು ಸಮರ್ಪಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇದರಿಂದ ಜೋರು ಮಳೆ ಬಂದರೆ ನೀರು ರಸ್ತೆ ಮೇಲೆ ನಿಲ್ಲುತ್ತಿದೆ ಹಾಗೆಯೇ ಪಕ್ಕದಲ್ಲಿರುವ ಕಾಫಿ ತೋಟಕ್ಕೂ ನುಗ್ಗುತ್ತಿದೆ. ಮೊದಲೇ ಇದ್ದಂತಹ ಚರಂಡಿಯಲ್ಲಿ ಸಂಪೂರ್ಣ ಮಣ್ಣು ತುಂಬಿರುವುದರಿಂದ ರಸ್ತೆ ಮೇಲೆಲ್ಲ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ ಎಂದು ಜನ ಅಳಲು ತೋಡಿಕೊಂಡಿದ್ದರು.