ಕೊಡಗು : ಜಿಲ್ಲೆಗೆ ಕಳೆದ ವರ್ಷಗಳಿಂದ ಮಳೆಗಾಲ ಎಂದರೆ ಶಾಪವಾಗಿ ಬಿಟ್ಟಿದೆ. ಅಪಾರ ಮಳೆಯಿಂದಾದ ಅನಾಹುತಗಳು ಒಂದೆರಡಲ್ಲ. ಭಾರಿ ಭೂ ಕುಸಿತ, ಪ್ರವಾಹದಿಂದಾಗಿ 20ಕ್ಕೂ ಅಧಿಕ ಜೀವ ನಷ್ಟವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ನಾಮಾವಶೇಷವಾಗಿದೆ. 1,000ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಇದೀಗ ಮತ್ತೆ ಮಳೆಗಾಲ ಬರುತ್ತಿದೆ. ಸಂಭಾವ್ಯ ಅಪಾಯ ಎದುರಿಸಲು ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಎನ್‌ಡಿಆರ್‌ಎಫ್ ತಂಡ ಜಿಲ್ಲೆಗೆ ಆಗಮಿಸಿದೆ.
ಪ್ರವಾಹ, ಭೂಕುಸಿತ ಎದುರಾದಾಗ ಜನರನ್ನು ರಕ್ಷಿಸಲು ಬೇಕಾದ ಬೋಟ್, ಓಪಿ, ಸ್ಟ್ರೆಚರ್ ಸೇರಿದಂತೆ ವಿವಿಧ ಸಾಧನಗಳನ್ನು ಎನ್‌ಡಿಆರ್‌ಎಫ್ ಸಿದ್ದಪಡಿಸಿಕೊಂಡಿದೆ. ಸಾಕಷ್ಟು ಕಡೆಗಳಲ್ಲಿನ ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ನುರಿತರು ತಂಡದಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಹದ ಸ್ಥಿತಿ ನಿಭಾಯಿಸಿ, ಇಲ್ಲಿನ ಪ್ರಾಕೃತಿಕ ಸ್ಥಿತಿಗತಿ ತಿಳಿದಿರುವ ಸಿಬ್ಬಂದಿಯನ್ನು ಮತ್ತೆ ಜಿಲ್ಲೆಗೆ ಕರೆಸಲಾಗಿದೆ.
2018ರ ಆಗಸ್ಟ್ 15ರಿಂದ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿತ್ತು. ನಂತರ ಮುಂದಿನ ಮೂರು ವರ್ಷಗಳೂ ಕೂಡ ಭೂಕುಸಿತ ಮತ್ತು ಪ್ರವಾಹದಿಂದ ಜಿಲ್ಲೆಯ ಜನತೆ ಬೇಸತ್ತು ಹೋಗಿದ್ದಾರೆ. ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಒಂದು ಕಾಲದಲ್ಲಿ ಎಂಥದ್ದೇ ಮಳೆಯಾದರೂ ಜಿಲ್ಲೆಯ ಜನ ಇಷ್ಟೆಲ್ಲ ಪ್ರಾಕೃತಿಕ ವಿಕೋಪಗಳನ್ನು ನೋಡಿರಲಿಲ್ಲ. ಆದ್ರೀಗ ಒಂದು ಸಣ್ಣ ಮಳೆ ಬಂದ್ರೂ ಸಾಕು ಜನತೆ ಆತಂಕದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುವ ಪರಿಸ್ಥಿತಿ ಇದೆ.
2018 ಮತ್ತು 19ರಲ್ಲಿ ಕೊಡಗು ಜಿಲ್ಲೆಯಲ್ಲಿ ಭೀಕರ ಪ್ರವಾಹ ಸಂಭವಿಸಿತ್ತು. ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದರು. ಸುಮಾರು 750 ಮಂದಿಗೆ ಸರ್ಕಾರ ಈಗಾಗಲೇ ಕೊಡಗಿನ ವಿವಿಧೆಡೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಭೂ ಕುಸಿತ ಮತ್ತು ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರವಲ್ಲದೇ ಇನ್ಫೋಸಿಸ್ ಪ್ರತಿಷ್ಠಾನ ವತಿಯಿಂದ ಸೋಮವಾರಪೇಟೆ ತಾಲ್ಲೂಕಿನ ಜಂಬೂರಿನಲ್ಲಿ 250 ಮನೆಗಳನ್ನು ನಿರ್ಮಿಸಲಾಗಿದೆ.
ಮನೆ ಕಾಮಗಾರಿ ಬಹುತೇಕ ಸಂಪೂರ್ಣವಾಗಿದೆ. ಒಂದು ಮನೆಗೆ ತಲಾ 11 ಲಕ್ಷ ರೂ ವೆಚ್ಚ ಮಾಡಲಾಗಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದಿದ್ದಲ್ಲಿ ಈಗಾಗಲೇ ಸಂತ್ರಸ್ತರು ನೆಮ್ಮದಿಯಿಂದ ಹೊಸ ಮನೆಗಳಿಗೆ ಪ್ರವೇಶ ಮಾಡಬೇಕಾಗಿತ್ತು. ಆದ್ರೆ ಮನೆಗಳನ್ನು ಐದು ವರ್ಷವಾದ್ರೂ ಇನ್ನೂ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿಲ್ಲ. ಇನ್ನೇನು ಮಳೆಗಾಲ ಶುರುವಾಗುವುದರೊಳಗಾಗಿ ವಿತರಿಸಲಾಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.
ಈಗಾಗಲೇ ಜಲಪ್ರಳಯ ಮತ್ತು ಭೂ ಕುಸಿತವಾಗುವ ಸ್ಥಳಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಮೊದಲನೆಯದಾಗಿ ಜಿಲ್ಲೆಯಲ್ಲಿ ಸುಮಾರು 90 ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ಈ ಪೈಕಿ 45 ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಬಹುದು ಎಂದು ಗುರುತಿಸಲಾದರೆ, 40 ಸ್ಥಳಗಳಲ್ಲಿ ಪ್ರವಾಹ ತಲೆದೋರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಳೆಯ ಅವಾಂತರಗಳಿಂದ ಜನ- ಜಾನುವಾರು ರಕ್ಷಣೆ ಮಾಡಲು ಸಕಲ ರೀತಿಯ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳತ್ತಿದೆ.
ಇದನ್ನೂ ಓದಿ : ಮಳೆ ಅನಾಹುತ ತಡೆಯಲು ಕೊಡಗು ಜಿಲ್ಲಾಡಳಿತ ಸನ್ನದ್ಧ: ಕಲ್ಲು ಕ್ವಾರಿಯಲ್ಲಿ ಕೂರ್ಗ್ ಅಡ್ವೆಂಚರ್ ಟೀಮ್ಗೆ ತರಬೇತಿ