ಕೊಡಗು : ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಿಲ್ಲ. ಕಳೆದ 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದ್ವೇಷದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಆರೋಪಿಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ''ದ್ವೇಷ ರಾಜಕಾರಣ ಯಾರು ಮಾಡುತ್ತಿದ್ದಾರೆ ಎಂಬುದು ಜನತೆಗೆ ಈಗಾಗಲೇ ಗೊತ್ತಾಗಿದೆ. ಮೋದಿ, ಅಮಿತ್ ಶಾ ಕಳೆದ 10 ವರ್ಷಗಳಿಂದ ಇಡಿ, ಸಿಬಿಐ, ಎಲೆಕ್ಷನ್ ಕಮಿಷನ್ ಎಲ್ಲವನ್ನು ಬಳಸಿಕೊಂಡು ದ್ವೇಷದ ರಾಜಕಾರಣ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಪಕ್ಷವು ಬಹಳ ಹಿಂದಿನಿಂದಲೂ ವಿರೋಧ ಪಕ್ಷದ ನಾಯಕರನ್ನು, ಇತರ ಪಕ್ಷಗಳನ್ನು ಬಹಳ ಗೌರವದಿಂದ ನಡೆಸಿಕೊಂಡು ಬಂದಿದೆ'' ಎಂದರು.
''ಕಾಂಗ್ರೆಸ್ ಪಕ್ಷ ದ್ವೇಷ ರಾಜಕಾರಣ ಮಾಡಿಲ್ಲ, ಮಾಡೋದು ಇಲ್ಲ. ಜನರನ್ನು ದಾರಿ ತಪ್ಪಿಸೋದು, ಧರ್ಮದ ರಾಜಕಾರಣ, ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿ ಸರ್ಕಾರ ಎಂದು ಟೀಕಿಸಿದರು. ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕರ್ತರ ಬಂಧನಕ್ಕೂ ಕಾಂಗ್ರೆಸ್ಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ವಿಚಾರ ಬಂದರೂ ಬಿಜೆಪಿಯವರು ವಿಷಯಾಂತರ ಮಾಡುತ್ತಾರೆ. ಅಭಿವೃದ್ಧಿ ವಿಚಾರವನ್ನು ಬಿಜೆಪಿಗರು ಮಾತನಾಡುವುದಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಕ್ಕೆ ಬರ ಪರಿಹಾರವನ್ನು ನೀಡಿಲ್ಲ. ಈ ಬಗ್ಗೆ ಯಾರೂ ಮಾತನಾಡುವುದಿಲ್ಲ'' ಎಂದು ಹೇಳಿದರು.
ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ : ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು ಪೂರೈಕೆಗೆ ಪ್ರಥಮ ಆದ್ಯತೆ ನೀಡಬೇಕು. ಜಿಲ್ಲೆಯ ಯಾವ ಭಾಗದಲ್ಲಿಯೂ ಕುಡಿಯುವ ನೀರಿನ ಸರಬರಾಜಿನಲ್ಲಿ ಸಮಸ್ಯೆ ಉಂಟಾಗಬಾರದು. ಹಾಗೆಯೇ ಜಾನುವಾರುಗಳಿಗೆ ಅಗತ್ಯ ಮೇವು ಪೂರೈಕೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕುಂಡಾಮೇಸ್ತ್ರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶಾಸಕರಾದ ಡಾ. ಮಂತರ್ ಗೌಡ ಅವರು ವಿಷಯ ಪ್ರಸ್ತಾಪಿಸಿದರು. ಜಲಜೀವನ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದರು.
ಇದನ್ನೂ ಓದಿ : ನಾನು ದ್ವೇಷ ರಾಜಕಾರಣ ಮಾಡಲ್ಲ, ಅಪರಾಧ ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ: ಸಿಎಂ ಸಿದ್ದರಾಮಯ್ಯ