ಕೊಡಗು: ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದಕ್ಕಿಂತ ಅಹಿತಕರ ಘಟನೆಗಳು ಸಂಭವಿಸಿದಾಗ ಹೇಗೆ ಕಾರ್ಯ ಪ್ರವೃತರಾಗಬೇಕು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟುಮಾಡುವುದಕ್ಕೂ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಇಂದು ಕೊಡಗಿನಲ್ಲಿ ಪೊಲೀಸ್ ಇಲಾಖೆ ಪ್ರಾತ್ಯಕ್ಷಿಕೆ ನಡೆಸಿತು.
ಕೋಮು ಹಾಗೂ ಸೂಕ್ಷ್ಮ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಕೊಡಗು ಪೊಲೀಸ್ ಇಲಾಖೆ ಮುಂದಾಗಿದ್ದು, ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಮಾಬ್ ಆಪರೇಷನ್ ಕವಾಯತು ನಡೆಸಿತು. ಟಿಪ್ಪು ಜಯಂತಿ, ಅಯೋಧ್ಯೆ ತೀರ್ಪು, ಈದ್ ಮಿಲಾದ್ ಹಬ್ಬ ಹಿನ್ನೆಲೆ, ಕೊಡಗಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕ್ರಮವಹಿಸಿದ್ದು, ಜಿಲ್ಲಾ ಪೊಲೀಸ್ ವತಿಯಿಂದ ಮಾಬ್ ಕವಾಯತು ಕಾರ್ಯಾಚರಣೆ ಮೂಲಕ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆದಾಗ ಗುಂಪು ಹೇಗೆ ಚದುರಿಸುವುದು ಎನ್ನುವ ಬಗ್ಗೆ ಒಂದು ಅಣಕು ಪ್ರದರ್ಶನ ನಡೆಯಿತು.
ಪ್ರತಿಭಟನೆ ವೇಳೆ ಗುಂಪು ಘರ್ಷಣೆ, ಟೈರ್‌ಗೆ ಬೆಂಕಿ ಹಚ್ಚಿ ಗಲಭೆ ಸೃಷ್ಟಿಸುವುದು, ಎರಡು ಗುಂಪುಗಳು ಪ್ರತಿಭಟನೆ ಮಾಡುತ್ತಿರುವ ವೇಳೆ ಗುಂಪು ಚದುರಿಸಿ ಪರಿಸ್ಥಿತಿ ಹತೋಟಿಗೆ ತರುವುದು, ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಡುವುದು ಅದನ್ನೂ ಕೇಳದಿದ್ದಾಗ ಗ್ಯಾಸ್ ಫೈರ್, ಫೈರ್ ವಾರ್ನಿಂಗ್ ಮೂಲಕ ಗುಂಪು ಚದುರಿಸಿವುದು ಆ ನಂತರ ಚಿಕ್ಕಪುಟ್ಟ ಗಾಯಗಳಾದಾಗ ಪ್ರಥಮ ಚಿಕಿತ್ಸೆ ನೀಡುವುದು ಸೇರಿದಂತೆ ಸಿಬ್ಬಂದಿ ಲಾಠಿ ಪ್ರದರ್ಶನ ಹೀಗೆ ಪೊಲೀಸ್ ಮೈದಾನದಲ್ಲಿ ಸಾಮರ್ಥ್ಯ ಪ್ರದರ್ಶಿಸಲಾಯಿತು.
ಪ್ರದರ್ಶನ ವೇಳೆ, ಜಿಲ್ಲೆಯ ಹಲವು ಹಿರಿಯ ಪೊಲೀಸರು ಹಾಗೂ ಹಿರಿಯ ಶ್ರೇಣಿಯ ಅಧಿಕಾರಿಗಳು ಕುಳಿತು ಸಿಬ್ಬಂದಿಯ ಕವಾಯತನ್ನು ಕುತೂಹಲದಿಂದ ವೀಕ್ಷಿಸಿದರು.