ಮಡಿಕೇರಿ(ಕೊಡಗು): ದೇಶದ ಭದ್ರತೆಯ ಉದ್ದೇಶದಿಂದ ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಕಾಯ್ದೆ ಜಾರಿಗೆ ತರಲಾಗಿದ್ದು, ಇದನ್ನು ಭಾರತೀಯರು ಬೆಂಬಲಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಸುಖಾ ಸುಮ್ಮನೆ ಅಪಪ್ರಚಾರ ನಡೆಸಲಾಗುತ್ತಿದೆ. ಜಿಲ್ಲೆಯಲ್ಲೂ ಇದರ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಲಾಗುತ್ತಿದೆ. ಶಾಸಕರಾದ ಹ್ಯಾರಿಸ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಇದರಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆಯಿಲ್ಲ. ಕಾಂಗ್ರೆಸ್, ಕಮ್ಯುನಿಸ್ಟ್, ಮುಸ್ಲಿಂ ಕೋಮುವಾದಿ ಸಂಘಟನೆಗಳಿಂದ ಶಾಂತಿ ಕದಡಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರದ ಉತ್ತಮ ಕೆಲಸಗಳನ್ನು ನೋಡಿ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹೊರಗಿನಿಂದ ಮುಸ್ಲಿಂ ಮುಖಂಡರನ್ನು ಆಹ್ವಾನಿಸಿ ಪ್ರಚೋದನಕಾರಿ ಭಾಷಣ ಮಾಡಿಸಲಾಗುತ್ತಿದೆ. ಕೊಡಗಿನಲ್ಲಿ ಲಕ್ಷಕ್ಕೂ ಹೆಚ್ಚು ವಲಸಿಗರಿದ್ದಾರೆ. ಇವರ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಹೊರ ದೇಶದ ನುಸುಳುಕೋರರನ್ನು ಹೊರ ಹಾಕಲು ಈ ಕಾಯ್ದೆಯ ಅನ್ವಯ ಆಗಬೇಕಿದೆ ಎಂದು ಸಲಹೆ ನೀಡಿದರು.
ಕಾಯ್ದೆ ತಿದ್ದುಪಡಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಕಾಯ್ದೆಯಲ್ಲಿ ಅಲ್ಪಸಂಖ್ಯಾತರಿಗೆ ಏನು ಸಮಸ್ಯೆ? ಇದರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಅಲ್ಪ ಸಂಖ್ಯಾತರ ಹೆಸರಲ್ಲಿ ರಾಜಕೀಯ ಮಾಡುವುದನ್ನು ಸಿದ್ದರಾಮಯ್ಯ ನಿಲ್ಲಿಸಲಿ. ತಮ್ಮ ಬೇಡಿಕೆ ಏನಿದೆಯೋ ಅದನ್ನು ಸರ್ಕಾರದ ಮುಂದೆ ಇಡಲಿ ಎಂದು ಆಗ್ರಹಿಸಿದ್ರು.
ಇನ್ನು ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಸಾಕಷ್ಟು ಅಕ್ರಮ ನಡೆಯುತ್ತಿದೆ. ಇಂದಿರಾ ಕ್ಯಾಂಟೀನ್‌ಗೆ ವಾಲ್ಮೀಕಿ ಹೆಸರಿಡುವ ವಿಚಾರ ಸದ್ಯಕ್ಕೆ ಸರ್ಕಾರದ ಮುಂದಿಲ್ಲ. ಕೆಲವರು ಪ್ರಸ್ತಾಪ ಮಾಡಿದ್ದಾರೆ ಅಷ್ಟೇ. ಅದನ್ನು ಸರ್ಕಾರವೇ ನಿರ್ಧರಿಸುತ್ತೆ. ಉಪ ಚುನಾವಣೆಗೂ ಪೂರ್ವದಲ್ಲೇ ಶಾಸಕರಿಗೆ ಮಾತು ಕೊಟ್ಟಂತೆ ನಾವು ನಡೆದುಕೊಳ್ಳಬೇಕಿದೆ. ಗೆದ್ದಿರುವ ಶಾಸಕರಿಗೆ ಉತ್ತಮವಾದ ಹುದ್ದೆ ನೀಡಲಾಗುತ್ತದೆ. ಕೊಟ್ಟ ಮಾತು ತಪ್ಪಲು ನಾವು ಮಾಜಿ ಸಿಎಂ ಕುಮಾರಸ್ವಾಮಿ ಅಲ್ಲ ಎಂದು ಬೋಪಯ್ಯ ಟಾಂಗ್ ನೀಡಿದ್ರು.