ಕೊಡಗು: ಮಡಿಕೇರಿ ತಾಲೂಕಿನ ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಪ್ರದೇಶಗಳ ಹಲವು ಕುಟುಂಬಗಳ ಮನೆಗಳು ಕುಸಿದಿವೆ. ಗದ್ದೆಗಳಿಗೆ ಮರಳು ಮತ್ತು ಮಣ್ಣು ತುಂಬಿ ಸಾಕಷ್ಟು ನಷ್ಟ ಉಂಟಾಗಿದೆ. ಈ ಭಾಗದಲ್ಲಿ 7ಕ್ಕೂ ಹೆಚ್ಚು ಸೇತುವೆಗಳು ಕೊಚ್ಚಿ ಹೋಗಿವೆ. ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ 2018ರಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪಕ್ಕಿಂತ ದುಪ್ಪಟ್ಟಾಗಿದೆ. ಇಲ್ಲಿನ ಜನರ ಕಷ್ಟ ಹೇಳತೀರದು ಎಂದು ಬೋಪಯ್ಯ ಖೇದ ವ್ಯಕ್ತಪಡಿಸಿದರು.
ಕೋರಂಗಾಲ, ಚೇರಂಗಾಲ ಮತ್ತು ತಣ್ಣಿಮಾನಿ ಗ್ರಾಮದ ಜನರ ಅಹವಾಲು ಆಲಿಸಿದರು. ಹಾಗೆಯೇ ಕೋಳಿಕಾಡು ಕಾಲೋನಿಗೆ ಭೇಟಿ ನೀಡಿ, ಇಲ್ಲಿನ ಮೂರು ಮನೆಗಳ ಬರೆ ಕುಸಿದಿರುವುದನ್ನು ವೀಕ್ಷಿಸಿದರು. ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಮನೆ ಕವಿತಾ ಪ್ರಭಾಕರ್, ತಹಶೀಲ್ದಾರ್ ಮಹೇಶ್ ಕೂಡ ಜೊತೆಯಲ್ಲಿದ್ದರು.