ಕೊಡಗು : ಕಾವೇರಿ ಉಗಮ ಸ್ಥಾನ ತಲಕಾವೇರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಹಾಗು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಅವರು ಮಂಗಳವಾರ ಭೇಟಿ ನೀಡಿ ಮಳೆಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಕಾವೇರಿಗೆ ಸಂಕಲ್ಪ ಕುಂಕುಮಾರ್ಚನೆ ಮೂಲಕ ವಿಶೇಷ ಪೂಜೆ ನೆರವೇರಿಸಿದರು. ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ತಲಕಾವೇರಿಗೆ ಭೇಟಿ ನೀಡಿದ್ದು, ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರಾಜ್ಯ ಸಮೃದ್ಧವಾಗಲಿ ಎಂದು ತಾಯಿ ಕಾವೇರಿ ಮಾತೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ಮತ್ತೊಂದೆಡೆ ನಗರದ ಜಿ.ಪಂ.ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಹುಲಿ ದಾಳಿಯಿಂದ ಜಿಲ್ಲೆಯ ಜನತೆ ಸಂಕಷ್ಟ ಅನುಭವಿಸುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಹಾಗು ವನ್ಯ ಪ್ರಾಣಿಗಳ ಹಾವಳಿ ತಡೆಯುವಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವನ್ಯಜೀವಿಗಳ ದಾಳಿಗಳ ನಿಯಂತ್ರಣಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿಸಲಾಗುವುದು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಎನ್.ಎಸ್ ಬೋಸರಾಜು ಕಟ್ಟುನಿಟ್ಟಿನ ಸೂಚನೆ ಕೊಟ್ಟರು. ಇದೆ ಸಂಬಂಧ ವಿಷಯ ಪ್ರಸ್ತಾಪಿಸಿದ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಕಾಡಾನೆ ನಿಯಂತ್ರಣಕ್ಕೆ ಅಗತ್ಯ ಇರುವ ಕಡೆಗಳಲ್ಲಿ ಬ್ಯಾರಿಕೇಡ್, ತಂತಿಬೇಲಿ, ಟ್ರಂಚ್ ನಿರ್ಮಾಣ ಮಾಡಬೇಕು. ದಕ್ಷಿಣ ಕೊಡಗಿನ ಭಾಗದಲ್ಲಿ ಆಗಾಗ ಹುಲಿ ದಾಳಿ ನಡೆಯುತ್ತಿದ್ದು, ಇದರಿಂದ ಜನ ಜಾನುವಾರುಗಳಿಗೆ ತುಂಬಾ ತೊಂದರೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರು, ಕೊಡಗು ಜಿಲ್ಲೆಯ ತೋಟಗಳಲ್ಲಿ ಕಾಡಾನೆಗಳು ವಾಸಿಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸಲು ಮುಂದಾಗಿದೆ. ಕಾಡಾನೆ ಹಾವಳಿಯಿಂದ ಬೆಳೆ ಹಾನಿಯಾದಲ್ಲಿ ಬೆಳೆ ಹಾನಿ ಪರಿಹಾರ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ಅವರು ಶೇ.80 ರಷ್ಟು ಕಾಡಾನೆಗಳು ಕಾಫಿ ತೋಟಗಳಲ್ಲಿ ಸುತ್ತಾಡಿಕೊಂಡಿವೆ. ಕಳೆದ 15 ವರ್ಷಗಳಿಂದ ಕಾಡಾನೆಗಳು ಸಹ ಹೆಚ್ಚಾಗಿದ್ದು, ಇದನ್ನು ನಿಯಂತ್ರಣ ಮಾಡಬೇಕು. ಜೊತೆಗೆ ಕಾಡಾನೆಗಳಿಗೆ ಆಹಾರ, ನೀರು ಸಿಗುತ್ತಿಲ್ಲ. ಆದ್ದರಿಂದ ಬಿದಿರು ಗಿಡವನ್ನು ಹೆಚ್ಚು ನೆಡಬೇಕು ಎಂದು ಬಾಂಡ್ ಗಣಪತಿ ಅವರು ಸಲಹೆ ನೀಡಿದರು.
ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಮುಂದಾಗುವಂತೆ ಸಚಿವರು ನಿರ್ದೇಶನ ನೀಡಿದರು. ಈ ಕುರಿತು ಜಿ.ಪಂ ಸಿಇಒ ಡಾ.ಎಸ್. ಆಕಾಶ್ ಅವರು ಮಾತನಾಡಿ 2024 ರ ಡಿಸೆಂಬರ್ ಒಳಗೆ ಪ್ರತೀ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕಿದೆ. ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಸಂಬಂಧ ತಾ.ಪಂ.ಇಒ ಗಳೇ ಹೆಚ್ಚಿನ ಹೊಣೆಗಾರಿಕೆ ವಹಿಸಬೇಕು ಎಂದು ಸೂಚಿಸಿದರು.
ಮುಂದಿನ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಗಮನಹರಿಸಬೇಕು. ಗುಣಮಟ್ಟದ ಬಿತ್ತನೆ ಬೀಜ ಪೂರೈಸಬೇಕು. ದೂರು ಬರದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಹೇಳಿದರು.
ಇದನ್ನೂ ಓದಿ : ವರ್ಗಾವಣೆಗೆ ನೇರ ನನ್ನ ಬಳಿ ಬನ್ನಿ, ದಲ್ಲಾಳಿ ಬೇಡ: ಇಂಜಿನಿಯರ್ಗಳಿಗೆ ಸಚಿವ ಎನ್.ಎಸ್ ಬೋಸರಾಜು ಕಿವಿಮಾತು