ಕೊಡಗು: ಜಿಲ್ಲೆಯಲ್ಲಿ ಮಳೆ ಅವಾಂತರ ಹೆಚ್ಚಾಗಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿದ್ದಾರೆ. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ಪ್ರವಾಹಪೀಡಿತ, ಮನೆಹಾನಿ ಪ್ರದೇಶಗಳು ಮತ್ತು ನಗರದ ಕಾಳಜಿ ಕೇಂದ್ರಕ್ಕೆ ತೆರಳಿದ ಸಚಿವರು ಅಹವಾಲು ಆಲಿಸಿದರು.
ಸೋಮವಾರಪೇಟೆ ತಾಲೂಕಿನ ಬೆಸೂರು, ನಿರುಗುಂದ ಹಾಗೂ ಕೆಳಕೊಡ್ಲಿ ಗ್ರಾಮದಲ್ಲಿ ನಿರಂತರ ಮಳೆಗೆ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸಿದ ಸಚಿವರು ಸ್ಥಳದಲ್ಲಿಯೇ ಪರಿಹಾರದ ಚೆಕ್ ವಿತರಿಸಿದ್ದಾರೆ. ಜಿಲ್ಲೆಯ 2 ನೇ ಮೊಣ್ಣಂಗೇರಿ, ಚೆಂಬು, ಪೆರಾಜೆ ಭಾಗದಲ್ಲಿ ಆಗಾಗ ಸಂಭವಿಸುತ್ತಿರುವ ಭೂಕಂಪನ ಹಾಗೂ ಭೂ ಕುಸಿತಗಳಿಗೆ ಸೂಕ್ತ ಕಾರಣ ತಿಳಿಯಲು, ಕೇಂದ್ರ ತಜ್ಞರ ತಂಡವು ಜಿಲ್ಲೆಗೆ ಆಗಮಿಸಲಿದೆ. ಸದ್ಯ ಮಳೆ ಕಡಿಮೆ ಆಗುವವರೆಗೂ ತಜ್ಞರ ತಂಡದವರಿಗೆ ಆ ಭಾಗದ ಪ್ರದೇಶ ಪರಿಶೀಲಿಸಲು ಸಾಧ್ಯವಿಲ್ಲ. ಮಳೆ ನಿಂತ ಕೂಡಲೇ ತಜ್ಞರು ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ ಎಂದು ಬಿ.ಸಿ.ನಾಗೇಶ್ ಹೇಳಿದರು.
ಇದನ್ನೂ ಓದಿ: ನಿರಂತರವಾಗಿ ಸುರಿಯುತ್ತಿರೋ ಮಳೆ: ನೀರಿನ ಮಟ್ಟ ಹೆಚ್ಚಳ, ಕೊಡಗುದಲ್ಲಿ ಜನ ಜೀವನ ಅಸ್ತವ್ಯಸ್ತ
ಮಕ್ಕಳ ಹುಟ್ಟುಹಬ್ಬದಲ್ಲಿ ಪಾಲ್ಗೊಂಡ ಸಚಿವರು: ನಗರದ ರೆಡ್‍ಕ್ರಾಸ್ ಭವನದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಕಾಳಜಿ ಕೇಂದ್ರದಲ್ಲಿರುವ ಮಕ್ಕಳ ಜೊತೆ ಹುಟ್ಟುಹಬ್ಬದಲ್ಲಿಯೂ ಪಾಲ್ಗೊಂಡರು. ಸಂತ್ರಸ್ತ ಮಕ್ಕಳು ಸಚಿವರು ಜೊತೆ ಕೇಕ್ ಕತ್ತರಿಸಿದರು. ಇದೇ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿರುವ ಮಕ್ಕಳಿಗೆ ಸ್ವೆಟರ್ ವಿತರಿಸಲಾಯಿತು.