ಕೊಡಗು: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದಿಂದ ಕೊಡಗಿನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಒಂದು ಕಡೆ ಸಿದ್ದರಾಮಯ್ಯರ ಕಾರಿಗೆ ವ್ಯಕ್ತಿ ಮೊಟ್ಟೆ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದರೆ, ಮತ್ತೊಂದು ಕಡೆ ಆ ವ್ಯಕ್ತಿ ಬಿಜೆಪಿ ಶಾಸಕನ ಜೊತೆ ಇರುವ ಫೋಟೋ ಕೂಡ ವೈರಲ್ ಆಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೊಟ್ಟೆ ಹೊಡೆದ ವ್ಯಕ್ತಿ ಬಿಜೆಪಿ ಶಾಸಕರ ಜೊತೆ ಗುರುತಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕರ ಆಕ್ರೋಶದ ಕಿಚ್ಚು ಹೆಚ್ಚಾಗಿದೆ. ನಿನ್ನೆ ಬಿಜೆಪಿ ಶಾಸಕರು ಮೊಟ್ಟೆ ಎಸೆತಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ನಾಯಕರೇ ಪ್ರಚಾರಕ್ಕೆ ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದರು. ಆದರೆ ಗುಡ್ಡೆ ಹೊಸೂರ ರಸ್ತೆಯಲಿ ಸಿದ್ದರಾಮಯ್ಯ ಕಾರು ಚಲಿಸುತ್ತಿದ್ದಾಗ ಮೊಟ್ಟೆ ಹೊಡೆದ ವಿಡಿಯೋದಲ್ಲಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾಗಿದ್ದು, ಶಾಸಕರ ಜೊತೆ ಗುರುತಿಸಿಕೊಂಡಿದ್ದಾನೆ ಎನ್ನಲಾಗಿದೆ.
ಶಾಸಕರ ಜೊತೆ ಫೋಟೋ ಇದ್ದರೂ ಕೂಡ ಆ ವ್ಯಕ್ತಿ ನಮ್ಮ ಪಕ್ಷದವನಲ್ಲ ಎಂದು ಶಾಸಕ ರಂಜನ್ ಮತ್ತು ಶಾಸಕ ಕೆ.ಜಿ ಬೋಪಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಕಾರು ಬರುತ್ತಿದಂತೆ ಮಡಿಕೇರಿ ನಗರ ಸಭೆ ಅಧ್ಯಕ್ಷೆ ಸೇರಿದಂತೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆ ಮಾಡುತ್ತಿದ್ದರೆ, ಹಿಂದೆ ಬಂದ ವ್ಯಕ್ತಿಗಳು ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ಮೊಟ್ಟೆ ಎಸೆದ ವ್ಯಕ್ತಿಯನ್ನು ಸ್ಥಳದಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಗೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದ್ದ ಬಿಜೆಪಿ ಶಾಸಕರು ರಾತ್ರೋರಾತ್ರಿ ಬಂಧನವಾದ ವ್ಯಕ್ತಿಯನ್ನು ಬಿಡಿಸಿಕೊಂಡು ಬಂದಿದ್ದಾರೆ ಎಂದು ಮಡಿಕೇರಿಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಖಂಡಿಸಿ ಆ.26 ರಂದು ಮಡಿಕೇರಿ ಚಲೋಗೆ ಕಾಂಗ್ರೆಸ್ ಕರೆ ಕೊಟ್ಟಿದೆ. ಜಿಲ್ಲೆಯಲ್ಲಿ ಪೊಲೀಸ್ ವೈಫಲ್ಯ ಖಂಡಿಸಿ ಕೊಡಗು ಜಿಲ್ಲೆಯ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಸಿದ್ದತೆ ಮಾಡಿಕೊಂಡಿದೆ. ಬಿಜೆಪಿ ಪಕ್ಷ ಕೂಡ ಪ್ರತಿರೋಧವಾಗಿ ಜನಜಾಗೃತಿ ಸಮಾವೇಶ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ಪ್ರತಿಕ್ರಿಯೆ