ಮಡಿಕೇರಿ (ಕೊಡಗು): ಕೊರಗಜ್ಜನ ಬಳಿ ಹರಕೆಯಾಗಿ ಇರಿಸಿದ್ದ ಮದ್ಯವನ್ನ ಕದ್ದು, ಬಳಿಕ ಕದ್ದ ವ್ಯಕ್ತಿಯೇ ಬಂದು ತಪ್ಪಾಯಿತು ಎಂದು ಹರಕೆ ತೀರಿಸಿರುವ ಅಚ್ಚರಿಯ ಘಟನೆ ನಡೆದಿದೆ. ಮಡಿಕೇರಿ ಸಮೀಪದ ಕೆದಕಲ್ ಗ್ರಾಮದಲ್ಲಿ ಕೊರಗಜ್ಜನ ಸನ್ನಿಧಾನದಲ್ಲಿ ಈ ಪವಾಡ ನಡೆದಿದೆ.
ಹರಕೆಯೆಂದು ಭಕ್ತಾದಿಗಳು ಇರಿಸಿದ್ದ ಮದ್ಯವನ್ನು ವ್ಯಕ್ತಿಯೋರ್ವ ಕದ್ದು ಕುಡಿದಿದ್ದ. ಇದಾದ ಬಳಿಕ ಆತನಿಗೆ ದೃಷ್ಟಿದೋಷದ ಸಮಸ್ಯೆ ಎದುರಾಗಿದ್ದು, ಕೊರಗಜ್ಜನ ಸನ್ನಿಧಾನಕ್ಕೆ ಬಂದು ತಪ್ಪಾಯಿತು ಎಂದು ಕಾಣಿಕೆ ಕಟ್ಟಿದ ಬಳಿಕ ದೃಷ್ಟಿಯಲ್ಲಿ ಮತ್ತೆ ಚೇತರಿಕೆಯಾಗಿದೆ.
ನಡೆದಿದ್ದೇನು..?
ಈ ಕೊರಗಜ್ಜನ ಗುಡಿಯಲ್ಲಿ ಮದ್ಯ, ಕೋಳಿ ಒಪ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಮಹಿಳೆಯೊಬ್ಬರು ಕಳೆದೊಂದು ವಾರದ ಹಿಂದೆ ತನ್ನ ಪತಿ ಕುಡಿತ ಬಿಡಲಿ ಎಂದು ಹರಕೆಯಾಗಿ ಮದ್ಯ ಒಪ್ಪಿಸಿದ್ದರು. ಈ ವೇಳೆ ಕತ್ತಲಲ್ಲಿ ಗುಡಿಗೆ ಆಗಮಿಸಿದ್ದ ವ್ಯಕ್ತಿ ಎರಡು ಪ್ಯಾಕೆಟ್ ಮದ್ಯ ಎಗರಿಸಿ ಪರಾರಿಯಾಗಿದ್ದ.
ಗುಡಿಯ ಸಿಸಿಟಿಯಲ್ಲಿ ವ್ಯಕ್ತಿ ಸೆರೆಯಾದರೂ ಆತನ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಮದ್ಯ ಕದ್ದವನಿಗೆ ಶಿಕ್ಷೆ ಕೊಡುವಂತೆ ಕೊರಗಜ್ಜನಿಗೆ ಅರ್ಚಕರು ಹರಕೆ ಕಟ್ಟಿದ್ದರಂತೆ. ಇದರಿಂದಾಗಿ ಎಣ್ಣೆ ಕದ್ದವನ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಆತನ ಕಣ್ಣಿನ ಸುತ್ತಲೂ ಕಪ್ಪಾಗಿ, ಕಣ್ಣು ಕಾಣಿಸದಂತೆ ಆಗಿದೆ.
ಬಳಿಕ ತನ್ನ ತಪ್ಪಿನ ಅರಿವಾಗಿ ಗುಡಿಗೆ ಬಂದ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಲ್ಲದೆ ಗುಡಿಗೆ ಕಾಣಿಕೆ ಒಪ್ಪಿಸಿ ತೆರಳಿದ್ದಾನೆ. ಇದಾದ ಬಳಿಕ ಆತನ ದೃಷ್ಟಿ ಮೊದಲಿನಂತೆ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇಮ್ಮಡಿಗೊಂಡ ಪ್ರವಾಸಿಗರ ಸ್ವರ್ಗ ಕಾವೇರಿ ನಿಸರ್ಗಧಾಮದ ಸೊಬಗು