ಕೊಡಗು: ಗುಂಡು ಹಾರಿಸಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಹಂತಕರು ನಾಪತ್ತೆಯಾಗಿದ್ದಾರೆ. ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೈಮನ ಮದು ನಾಣಯ್ಯ (45) ಎಂದು ಸಾವಿಗೀಡಾದವರು. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೆದುಮುಳ್ಳುರು ಗ್ರಾಮ ಪಂಚಾಯತಿ ತೋರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.
ಮದು ನಾಣಯ್ಯ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಹೊಂದಿದ್ದರು. ನಾಗರಬಾವಿಯಲ್ಲಿ ತನ್ನದೇ ಕಚೇರಿ ಹೊಂದಿದ್ದು ಪೀಣ್ಯ ಕೈಗಾರಿಕ ಘಟಕದಲ್ಲಿ ಕಾರ್ಖಾನೆ ನಡೆಸಿಕೊಂಡಿದ್ದರು. ಕಳೆದ ಎರಡು ದಿನಗಳ ಹಿಂದೆ ಊರ ದೇವರ ಉತ್ಸವಕ್ಕೆಂದು ಕೊಡಗಿಗೆ ಬಂದಿದ್ದರು ಎಂಬ ಮಾಹಿತಿ ಸಿಕ್ಕಿದೆ. ನಿನ್ನೆ (ಶನಿವಾರ) ರಾತ್ರಿ 12 ಗಂಟೆಗೆ ಊರಿನ ಸ್ನೇಹಿತರೊಂದಿಗೆ (ವಿಶು) ಹಬ್ಬದ ಪ್ರಯುಕ್ತ ಮಾತುಕತೆ ನಡೆಸಿದ್ದರು. ತದನಂತರ ಮನೆಗೆ ವಾಪಸಾಗುವಾಗ ಅನತಿ ದೂರದಲ್ಲೇ ಇದ್ದ ತನ್ನ ಕಾರಿನ ಬಳಿ ತೆರಳಿದ್ದು, ಹಂತಕರು ಗುಂಡು ಹಾರಿಸಿದ್ದಾರೆ.
ಮರ ವಿಚಾರಕ್ಕೆ ನಡೆದಿತ್ತು ಜಗಳ: ಕಳೆದ ಕೆಲವು ದಿನಗಳ ಹಿಂದೆ ಊರಿನ ತೋಟದ ಮರದ ವಿಚಾರವಾಗಿ ಪರಸ್ಪರ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಮದು ಅವರ ತಂದೆ ಬೈಮನ ಎಸ್. ನಾಣಯ್ಯ (ಮಣಿ) ಈ ಕೊಲೆಯನ್ನು ಇದೇ ಊರಿನ ವ್ಯಕ್ತಿಗಳೇ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇವೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ನನ್ನ ಮಗನ ಏಳಿಗೆ ಸಹಿಸದದವರಿಂದ ಕೃತ್ಯ ನಡೆದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಕೊಡಗು ಎಸ್‍ಪಿ ರಾಜರಾಜನ್ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಡಾನ್ ಅತೀಕ್ ಅಹ್ಮದ್ ಹತ್ಯೆ: ಮಾದಕ ವ್ಯಸನಿ, ನಿರುದ್ಯೋಗಿಗಳಾಗಿದ್ದ ಶೂಟರ್ಗಳಿಂದ ಹತ್ಯೆ