ಸುಂಟಿಕೊಪ್ಪ (ಕೊಡಗು): ನೀರಿನಲ್ಲಿ ಮುಳುಗಿ ಯುವಕ ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಬೆಟ್ಟಗೇರಿಯಲ್ಲಿ ನಡೆದಿದೆ.
ಸುಂಟಿಕೊಪ್ಪ ಸಮೀಪದ ಬೆಟ್ಟಗೇರಿಯ ತೋಟದ ಕಾರ್ಮಿಕ ಮುರುಗೇಶ್ ಎಂಬುವವರ ಮಗ ಕೃಷ್ಣ ಅಪ್ಪಿ (26) ಮೃತ ಯುವಕ.
ಸುಂಟಿಕೊಪ್ಪದ ವರ್ಕ್ ಶಾಪ್ವೊಂದರಲ್ಲಿ ಟಿಂಕರಿಂಗ್ ಕೆಲಸ ಮಾಡುತ್ತಿದ್ದ ಅಪ್ಪಿ ಇಂದು ಸಂಜೆ ಗೆಳೆಯರೊಂದಿಗೆ ತೋಟದಿಂದ ಸ್ವಲ್ಪ ದೂರದಲ್ಲಿ ಹರಿಯುತ್ತಿರುವ ಹಟ್ಟಿ ಹೊಳೆಗೆ ಹೋಗಿದ್ದಾನೆ.
ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದ ಈತ ಮೊಬೈಲ್‌ನಲ್ಲಿ ಮಾತನಾಡುತ್ತಾ ಉಳಿದವರನ್ನು ಅಲ್ಲಿಯೇ ಬಿಟ್ಟು ಒಬ್ಬನೇ ಹೊಳೆಯತ್ತ ನಡೆದುಕೊಂಡು ಹೋಗಿದ್ದಾನೆ. ಆದರೆ ಎಷ್ಟೇ ಹೊತ್ತಾದರೂ ಆತ ಹಿಂತಿರುಗದ ಕಾರಣ ಸ್ನೇಹಿತರು ಹುಡುಕಾಡಿದಾಗ ಹೊಳೆಯಲ್ಲಿ ಮೃತದೇಹ ಕಂಡುಬಂದಿದೆ.
ನಂತರ ಕಳೇಬರವನ್ನು ನೀರಿನಿಂದ ಮೇಲಕ್ಕೆತ್ತಿ ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಪ್ಪಿ ಯಾವ ರೀತಿ ಜಲ ಸಮಾಧಿಯಾಗಿದ್ದಾನೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.