ಕೊಡಗು: ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಜೋರಾಗಿದೆ. ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ಗುಡ್ಡದ ಕೆಳಗೆ ವಾಸ ಮಾಡುವ ಆರು ಮನೆಗಳನ್ನು ಸ್ಥಳಾಂತರಿಸಲಾಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ.
ಕಳೆದ ಮೂರು ವರ್ಷಗಳಿಂದ ಮಳೆಯ ಅಬ್ಬರದಿಂದ ಕಂಗಾಲಾಗಿದ್ದ ಜಿಲ್ಲೆಯ ಜನರು ಮತ್ತೆ ಭೀತಿಯಲ್ಲಿದ್ದಾರೆ. ಗುಡ್ಡ ಕುಸಿತದಿಂದ ಮನೆಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮುಜಾಗ್ರತೆ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಅಲ್ಲಿನ ನಿವಾಸಿಗಳನ್ನು ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಮಹೇಶ್ ಹೇಳಿದರು.
ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಆರಂಭವಾಗಿದೆ. ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ನದಿಪಾತ್ರದ ಜನರು ಮತ್ತು ಬೆಟ್ಟಗುಡ್ಡದಲ್ಲಿ ನೆಲೆಸಿರುವವವರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಟವರ್ ಕೆಳಭಾಗದಲ್ಲಿ ಮಣ್ಣು ಕುಸಿತ
ಮಡಿಕೇರಿಯ ಆಕಾಶವಾಣಿ ಟವರ್ ಕೆಳಭಾಗದಲ್ಲಿ ಮಣ್ಣು ಕುಸಿತವಾಗಿದೆ. ಟವರ್ ಕೆಳ ಭಾಗದಲ್ಲಿ ಹಲವಾರು ಮನೆಗಳಿದ್ದು ನಿವಾಸಿಗಳು ಆತಂಕದಲ್ಲಿದ್ದಾರೆ. ಮಡಿಕೇರಿಯ ಎತ್ತರದ ಪ್ರದೇಶದಲ್ಲಿ ಟವರ್ ನಿರ್ಮಾಣ ಮಾಡಲಾಗಿದೆ. ಹೆಚ್ಚು ಮಳೆ ಬೀಳುತ್ತಿದ್ದು ಮಣ್ಣು ಜಾರಿದ್ರೆ ಟವರ್ ಕುಸಿತವಾಗಿ ಮನೆಗಳ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಭಯದಲ್ಲಿದ್ದಾರೆ.
ಹಿಂದೆಯೂ ಟವರ್ ಕೆಳಗೆ ಮಣ್ಣು ಕುಸಿದಿದ್ದು, ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರು. ಆದರೆ ಈಗ ಮತ್ತೆ ಮಣ್ಣು ಕುಸಿತವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.