ಕೊಡಗು: ಜಿಲ್ಲೆಯಲ್ಲಿ ಮಳೆಯಬ್ಬರ ಕಡಿಮೆಯಾಗಿದೆ. ಕಳೆದ ಕೆಲ ದಿನಗಳು ಎಡೆಬಿಡದೇ ಸುರಿದ ಮಳೆಯಿಂದ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ. ಮೊಂಣ್ಣಗೇರಿಯ ಸೇತುವೆಯ ಎರಡೂ ಕಡೆ ಮಣ್ಣು ಕೊಚ್ಚಿ ಹೋಗಿದೆ. ಜೊತೆಗೆ ಇಲ್ಲಿ ರಸ್ತೆ ಸಂಪರ್ಕವಿಲ್ಲ. ಗ್ರಾಮಸ್ಥರು ಜೀವ ಕೈಯಲ್ಲಿಡಿದು ಬೀಳುವ ಹಂತದಲ್ಲಿರುವ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ.
ಮಡಿಕೇರಿ ತಾಲೂಕಿನ ಗಾಳಿಬೀಡು ಪಂಚಾಯಿತಿಗೆ ಸೇರಿದ ಮೊಂಣ್ಣಗೇರಿಯ ರಾಮನದಿಯ ಸೇತುವೆಯ ಎರಡೂ ಕಡೆಗಳಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಗ್ರಾಮಕ್ಕೆ ತೆರಳಲು ಇದೊಂದೇ ಮಾರ್ಗವಿರುವ ಕಾರಣ ಸೇತುವೆಯ ಎರಡೂ ಕಡೆ ಮರದ ಕಟ್ಟಿಗೆಗಳನ್ನು ಜೋಡಿಸಲಾಗಿದೆ. ಜೀವ ಭಯದಲ್ಲೇ ಜನರು ಸಂಚಾರ ಮಾಡುತ್ತಿದ್ದಾರೆ.
2018ರಲ್ಲಿ ರಾಮನದಿಗೆ ಸೇತುವೆ ಕಟ್ಟಲಾಗಿದೆ. ಆದ್ರೆ ಸೇತುವೆ ಕೆಳ ಭಾಗಕ್ಕೆ ಕಬ್ಬಿಣದ ಪಿಲ್ಲರ್ ಹಾಕದೇ ಹಾಗೇ ಒಂದು ಕಲ್ಲಿನ ಮೇಲೆ ಸಿಮೆಂಟ್ ಹಾಕಿ ಕಟ್ಟಲಾಗಿತ್ತು. ಈಗ ಮಳೆಯಿಂದ ಬೇಸ್ನಲ್ಲಿದ್ದ ಕಲ್ಲು ಕೊಚ್ಚಿ ಹೋಗಿ ಸೇತುವೆ ಬೀಳುವ ಹಂತಕ್ಕೆ ತಲುಪಿದೆ. ಇದು 30 ಮನೆಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದ್ದು, ಎಲ್ಲರೂ ಈ ಸೇತುವೆಗೆ ಅವಲಂಬಿತರಾಗಿದ್ದಾರೆ. ಆದಷ್ಟು ಬೇಗ ಈ ಸೇತುವೆ ಸರಿ ಮಾಡಿಕೊಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ಪರ್ಯಾಯ ರಸ್ತೆಯಲ್ಲೂ ಬಿರುಕು, ಸಂಚಾರಕ್ಕೆ ಸಮಸ್ಯೆ