ಕೊಡಗು: ಹಗಲು ಹೊತ್ತಿನಲ್ಲಿ ನಡೆಯುವ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಜಂಬೂರು ಸವಾರಿಯೇ ಆಕರ್ಷಣೆಯಾದರೆ, ರಾತ್ರಿ ಹೊತ್ತಿನಲ್ಲಿ ನಡೆಯುತ್ತಿದ್ದ ಮಡಿಕೇರಿ ದಸರಾ, ಸುರಾ ಅಸುರರ ಲೋಕವನ್ನೇ ಧರೆಗೆ ಇಳಿಸಿ ಬಿಡುತಿತ್ತು. ಝಗಮಗಿಸುವ ವಿದ್ಯುತ್ ದೀಪಗಳ ಬೆಳಕಿನ ಚಿತ್ತಾರದಲ್ಲಿ ಯಾಂತ್ರಿಕ ಶಕ್ತಿ ಮೂಲಕ ದೇವತೆ, ರಾಕ್ಷಸರು ನಡೆಸುತ್ತಿದ್ದ ಯುದ್ಧಗಳು ನೋಡುಗರನ್ನು ನಿಬ್ಬೆರಗುಗೊಳಿಸುತ್ತಿದ್ದವು. ಹೀಗಾಗಿಯೇ ಮೈಸೂರು ದಸರಾಕ್ಕೆ ಬರುತ್ತಿದ್ದ ಲಕ್ಷಾಂತರ ನೋಡುಗರು ರಾತ್ರಿ ಮಡಿಕೇರಿಯಲ್ಲಿ ಸೇರುತ್ತಿದ್ದರು.
ಆದರೆ, ಕೊರೊನಾ ಮಹಾಮಾರಿಯಿಂದ ಈ ಬಾರಿ ಅದ್ಯಾವ ಸಂಭ್ರಮವೂ ಇರುವುದಿಲ್ಲ. ಬದಲಾಗಿ ಒಂಬತ್ತು ದಿನಗಳ ಕಾಲ ನಡೆಯುವ ದಸರಾದಲ್ಲಿ ಕೇವಲ ಕರಗ ಉತ್ಸವ ಇರಲಿದ್ದು, ವಿಜಯ ದಶಮಿಯಂದು ಕಳಸಗಳ ಮೆರವಣಿಗೆಗೆ ಮಾತ್ರ ನಡೆಯಲಿದೆ. ಕರಗ ಉತ್ಸವದಲ್ಲಾಗಲಿ, ಕಳಸಗಳ ಮೆರವಣಿಗೆಯಲ್ಲಾಗಲಿ 5 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದ್ದು, ಮಡಿಕೇರಿ ಮತ್ತು ಗೋಣಿಕೊಪ್ಪಲು ಎರಡು ದಸರಾಗಳಲ್ಲೂ ಕಟ್ಟುನಿಟ್ಟಿನ ಪಾಲನೆ ಮಾಡುವಂತೆ ಸೂಚಿಸಲಾಗಿದೆ.
ಮಡಿಕೇರಿ ದಸರಾಕ್ಕೆ 150 ಕ್ಕೂ ಅಧಿಕ ವರ್ಷಗಳ ಇತಿಹಾಸವಿದ್ದು, ಇದ್ದಕ್ಕಿದ್ದ ಹಾಗೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಜಿಲ್ಲಾಡಳಿತ ಕೇವಲ ಆಟೋಗಳಲ್ಲಿ ಕಳಸ ಮೆರವಣಿಗೆ ಮಾಡಲು ಅವಕಾಶ ನೀಡಿದೆ. ಆದರೆ, ಕನಿಷ್ಠ ಟ್ರ್ಯಾಕ್ಟರ್‌ಗಳ ಮೂಲಕವಾದರೂ ಸರಳವಾಗಿ ಮಂಟಪಗಳನ್ನು ಮಾಡಿ ಗದ್ದಿಗೆವರೆಗೆ ತೆರಳುವುದಕ್ಕಾದರೂ ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಸರ್ಕಾರಕ್ಕೂ ಕೂಡ ಮನವಿ ಮಾಡಿದ್ದೇವೆ. ದಸರಾ ಕ್ರೀಡಾಕೂಟಗಳಾಗಲಿ, ಮನೋರಂಜನಾ ಕಾರ್ಯಕ್ರಮಗಳಾಗಲಿ ಯಾವುದನ್ನೂ ನಡೆಸುವುದಿಲ್ಲ. ಅಲ್ಲದೇ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎನ್ನುವುದು ದಸರಾ ಸಮಿತಿಯ ಮುಖಂಡರ ಅಭಿಪ್ರಾಯ.