ಮಡಿಕೇರಿ(ಕೊಡಗು): ಐತಿಹಾಸಿಕ ಹಿನ್ನೆಲೆಯುಳ್ಳ ಮಂಜಿನ ನಗರಿ ಮಡಿಕೇರಿ ದಸರಾ ಹಿನ್ನೆಲೆ ಕಳೆದ ರಾತ್ರಿ ನಗರದೆಲ್ಲೆಡೆ ಸ್ತಬ್ಧಚಿತ್ರಗಳು ಮೇಳೈಸಿದವು. ರಸ್ತೆಯಲ್ಲಿ ಲೈಟಿಂಗ್ ಜನರಿಗೆ ಸ್ವಾಗತ ಕೋರುತ್ತಿದ್ದರೆ, ದಶ ಮಂಟಪಗಳು ಪುರಾಣ ಪ್ರಸಿದ್ದ ಕತೆಯ ಸಾರಂಶವನ್ನು ಧ್ವನಿ ಬೆಳಕಿನ ಮೂಲಕ ಗತಕಾಲದ ವೈಭವ ಸಾರುತ್ತಿದ್ದವು.
ದಶ ಮಂಟಪಗಳ ಶೋಭಾಯಾತ್ರೆ: ನಗರದ ಶ್ರೀ ಪೇಟೆ ಶ್ರೀರಾಮ ಮಂದಿರ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಚೌಡೇಶ್ವರಿ, ಕಂಚಿ ಕಾಮಾಕ್ಷಿಯಮ್ಮ, ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಕೋದಂಡರಾಮ, ಶ್ರೀ ಕೋಟೆ ಗಣಪತಿ ಹಾಗೂ ಶ್ರೀ ಕರವಲೆ ಭಗವತಿ ದೇವಾಲಯಗಳ ಒಂದೊಂದು ಮಂಟಪವೂ ಅಹೋರಾತ್ರಿ ಶೋಭಾಯಾತ್ರೆಯಲ್ಲಿ ಚಲನವಲನಗಳ ಮೂಲಕ ಪೌರಾಣಿಕ ಕಥಾಹಂದರವನ್ನ ಸಾದರಪಡಿಸಿದ್ದು ಜನರನ್ನ ಮೂಕ ವಿಸ್ಮಯರನ್ನಾಗಿಸಿತು.
ಮೈಸೂರು ದಸರಾ ಮುಗಿಸಿ ಕೊಡಗಿನತ್ತ ಲಕ್ಷ ಲಕ್ಷ ಜನರ ದಂಡು ಹರಿದು ಬಂದಿತ್ತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದರು. ನೂಕುನುಗ್ಗಲಿನ ನಡುವೆಯೂ ಜನರು ದಶಮಂಟಪಗಳನ್ನು ವೀಕ್ಷಿಸಲು ನಗರದಾದ್ಯಂತ ಕಾಲ್ನಡಿಗೆಯಲ್ಲೇ ತೆರಳಿ ಶೋಭಯಾತ್ರೆ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಇದನ್ನೂ ಓದಿ: ಐತಿಹಾಸಿಕ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ
ಕತ್ತಲೆಗೆ ಬೆಳಕಿನ ಚಿತ್ತಾರ: ಮೈಸೂರು ದಸರಾ ಜಂಬೂ ಸವಾರಿಯ ದಸರಾವಾಗಿದ್ದರೆ ಮಂಜಿನ ನಗರಿ ಮಡಿಕೇರಿಯಲ್ಲಿ ಜರಗುವುದು ಬೆಳಕಿನ ಸಂಭ್ರಮದ ದಸರಾ. ಮೈಸೂರು ಜಂಬೂಸವಾರಿ ಅಂತ್ಯಗೊಳ್ಳುತಿದ್ದಂತೆ ಮಡಿಕೇರಿ ದಸರಾ ಬೆಳದಿಂಗಳ ಬೆಳಕು ಸೇರಿದಂತೆ ವಿದ್ಯುತ್ ಬೆಳಕಿನಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಇಂತಹ ವೈಭವಯುತ ಸಂಭ್ರಮಕ್ಕೆ ರಾಜ್ಯದ ಹಲವು ಭಾಗಳಿಂದ ಬಂದಿದ್ದ ಲಕ್ಷಾಂತರ ಪ್ರವಾಸಿಗರು ಸಾಕ್ಷಿಯಾದರು. ಮೈಸೂರು ದಸರಾ ಹಗಲಿನಲ್ಲಿ ಆರಂಭವಾದರೆ ಮಡಿಕೇರಿ ದಸರಾ ರಾತ್ರಿ ಹೊತ್ತಿನಲ್ಲಿ ದಶಮಂಟಪಗಳ ಮೆರವಣಿಗೆಯ ಮೂಲಕ ಆರಂಭವಾಗಿತ್ತು.
ಬೆಳಗ್ಗೆವರೆಗೂ ಶೋಭಾಯಾತ್ರೆ: ರಾತ್ರಿ 12 ಗಂಟೆಯ ಸಮಯದಲ್ಲಿ ಮಡಿಕೇರಿಯ ವಿವಿಧೆಡೆಯಿಂದ ದಶ ದೇವಾಲಯಗಳಿಂದ ಆಯಾ ದೇವಾಲಯಗಳ ಸಮಿತಿಯವರು ರೂಪಿಸುವ ಆತ್ಯಾಕರ್ಷಕ ಮಂಟಪಗಳು ಶೋಭಾಯಾತ್ರೆ ಆರಂಭಿಸಿದವು. ದಶದಿಕ್ಕುಗಳಿಂದ ಮಂಟಪಗಳು ಹೋರಟು ಮಧ್ಯ ರಾತ್ರಿ ವೇಳೆಗೆ ಮುಖ್ಯ ರಸ್ತೆಯಲ್ಲಿ ಒಟ್ಟುಗೂಡಿ ಸಾಲು ಸಾಲಗಿ ಬೆಳಗ್ಗೆವರೆಗೂ ಶೋಭಾಯಾತ್ರೆ ನಡೆಸಿದವು.
ದಸರಾ ಮಹೋತ್ಸವದ ಆಕರ್ಷಣೆಯ ಕೇಂದ್ರ ಬಿಂದು ದಶಮಂಟಪಗಳು. ಒಂದೊಂದು ದಶಮಂಟಪಗಳು ಒಂದೊಂದು ಪುರಾಣ ಕಥೆಗಳಗಳನ್ನು ಹೇಳುವ ರೀತಿಯಲ್ಲಿ ಮಂಟಪಗಳನ್ನು ತಯಾರು ಮಾಡಲಾಗುತ್ತದೆ. ಮಂಟಪಗಳನ್ನು ತಯಾರಿಸಲು ಒಂದು ಮಂಟಪ್ಪಕೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ.
ಮೊದಲಿಗೆ ಆಯಾ ದೇವಸ್ಥಾನಗಳಿಂದ ಹೊರಟ ಸ್ತಬ್ಧಚಿತ್ರಗಳು ಒಂದು ಸುತ್ತು ನಗರವೆಲ್ಲ ಪ್ರದರ್ಶಿಸಿದವು. ಪ್ರಥಮ ಬಾರಿಗೆ ಪೇಟೆ ರಾಮಂದಿರದ ಆಂಜನೇಯ ಸ್ವಾಮಿ ಸ್ತಬ್ಧಚಿತ್ರ ನಗರದ ಸುತ್ತ ಮೆರವಣಿಗೆ ಹೊರಟಿತು. ನಗರದ ಚೌಕಿ ವೃತ್ತದಿಂದ ಸಾಗಿ ನಗರ ಪೊಲೀಸ್ ಠಾಣೆ, ಜನರಲ್ ತಿಮ್ಮಯ್ಯ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ಸ್ತಬ್ಧಚಿತ್ರಗಳ ಮುಂಭಾಗ ಹಾಗೂ ಹಿಂಬದಿಯಲ್ಲಿ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು. ರಾತ್ರಿಯಿಡೀ ಮೆರವಣಿಗೆ ಮಾಡಿ ಬೆಳಗಿನ ಜಾವ ಬನ್ನಿಮರಕ್ಕೆ ಪೂಜೆಸಲ್ಲಿಸಿದ ನಂತರ ದಸರಾಕ್ಕೆ ತೆರೆ ಎಳೆಯಲಾಯಿತು.
ಇದನ್ನೂ ಓದಿ: ಮಂಜಿನ ನಗರಿ ಮಡಿಕೇರಿ ದಸರಾ ವೈಭವ.. ನಾಡಹಬ್ಬ ನಡೆದು ಬಂದ ಹಾದಿ