ಮಡಿಕೇರಿ: ರಸ್ತೆ ಮಧ್ಯೆ ಕಾಡಾನೆ ಪ್ರತ್ಯಕ್ಷವಾದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ತೋಟದೊಳಗೆ ನುಗ್ಗಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ 5.30 ಕ್ಕೆ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಕಾರಿನಲ್ಲಿ ಪಾಲಿಬೆಟ್ಟದಿಂದ ಸಿದ್ದಾಪುರದತ್ತ ಬರುತ್ತಿದ್ದಾಗ ಹುಂಡಿ ಎಂಬಲ್ಲಿ ಕಾಡಾನೆ ಎದುರಾಗಿದೆ. ಕಾಡಾನೆ ನೋಡಿದ ಬ್ಯಾಂಕ್ ವ್ಯವಸ್ಥಾಪಕ ಗಾಬರಿಗೊಂಡಿದ್ದಾರೆ. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ತೋಟದೊಳಗೆ ನುಗ್ಗಿ ಆಲದ ಮರಕ್ಕೆ ಅಪ್ಪಳಿಸಿದೆ.
ಕಾರು ಡಿಕ್ಕಿಹೊಡೆದ ರಭಸಕ್ಕೆ ಮರ ಸೀಳು ಬಿಟ್ಟಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಮರಕ್ಕೆ ಕಾರು ಅಪ್ಪಳಿಸಿದಾಗ ಉಂಟಾದ ಶಬ್ದಕ್ಕೆ ಬೆದರಿದ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಅಪಘಾತಕ್ಕೆ ಒಳಗಾದ ಕಾರನ್ನು ಟ್ರ್ಯಾಕ್ಟರ್ ಸಹಾಯದಿಂದ ತೋಟದೊಳಗಿನಿಂದ ಹೊರಕ್ಕೆ ತರಲಾಗಿದೆ.