ಕೊಡಗು: ಭ್ರಷ್ಟಾಚಾರ ಮತ್ತು ಆದಾಯಮೀರಿದ ಆಸ್ತಿಗಳಿಕೆಗೆ ಕಡಿವಾಣ ಹಾಕಲು ಲೋಕಾಯುಕ್ತರು ನಿರ್ಧರಿಸಿದ್ದು, ಇಂದು ಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ಆದಾಯ ಮೀರಿ ಆಸ್ತಿಗಳಿಕೆ ಆರೋಪದಡಿ ಏಕಕಾಲದಲ್ಲಿ, ಕೆಲ ಉನ್ನತ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಅದರಲ್ಲಿ ಕೊಡಗಿನ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಬಶೀರ್ ಅವರ ಮನೆ ಮೇಲೆ ದಾಳಿ ನಡೆದಿದೆ. ಇವರಿಗೆ ಸಂಬಂಧಿಸಿದ ಎರಡು ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯ ಮೀರಿದ ಆಸ್ತಿಗಳಿಕೆ ಆರೋಪದಡಿ ಬಶೀರ್ ಹಾಗೂ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕುಂಜಿಲ ಗ್ರಾಮದಲ್ಲಿರುವ ಅವರ ಸಹೋದರನ ನಿವಾಸದ ಮೇಲೆ ಮೈಸೂರು ಇನ್ಸ್ಪೆಕ್ಟರ್ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇತ್ತ ಕುಶಾಲನಗರ ತಾಲೂಕಿನ ಗೊಂದಿಬಸವನಹಳ್ಳಿಯಲ್ಲಿ ಇರುವ ಬಶೀರ್ ಅವರ ಮನೆ ಮೇಲೆ ಡಿವೈಎಸ್‌ಪಿ ಪವನ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲೋಕಾಯುಕ್ತ ಅಧಿಕಾರಿಗಳ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ.. ದಾಖಲೆಗಳ ಪರಿಶೀಲನೆ
ಇದೇ ವೇಳೆ, ಬೆಂಗಳೂರಿನ ಹಲವೆಡೆಗಳಲ್ಲೂ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿಗಳಿಕೆ ಆರೋಪದಡಿ ಕೆ.ಆರ್.ಪುರ ತಹಶೀಲ್ದಾರ್ ಅಜೀತ್ ರಾಜ್ ರೈ ಎಂಬುವವರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಹಶೀಲ್ದಾರ್ ಅವರ ನಿವಾಸ ಮತ್ತು ಕಚೇರಿ ಮೇಲೆ ನಗರ ವಿಭಾಗದ ಎಸ್ಪಿ ಅಶೋಕ್ ನೇತೃತ್ವದ ತಂಡ ದಾಳಿ ನಡೆಸಿದೆ. ಸಹಕಾರನಗರ, ರಾಮಮೂರ್ತಿನಗರದಲ್ಲಿರುವ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.
ಅಜಿತ್ ರೈ ಈ ಹಿಂದೆ ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಕೆಲ ದಿನಗಳ ಹಿಂದೆ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡು ಮತ್ತೆ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸಲು ಅನುಮತಿ ನೀಡಿತ್ತು. ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೇ ಅಜಿತ್ ರೈ ಅವರನ್ನ ಬೇರೊಂದು ಕಡೆ ವರ್ಗಾವಣೆ ಮಾಡಲಾಗಿತ್ತು.
ದಾಳಿ ವೇಳೆ, ಅಧಿಕಾರಿಗಳ ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆಯಾಗಿದ್ದು, ಮಹತ್ವದ ದಾಖಲಾತಿಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: NIA RAID: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ.. ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳಲ್ಲಿ ಎನ್ಐಎ ದಾಳಿ