ಕೊಡಗು: ಮಡಿಕೇರಿ ತಾಲೂಕಿನ ಸುಂಟಿಕೊಪ್ಪ ಸಮೀಪದಲ್ಲಿರುವ ಎನ್‌ಜಿಓ ಸಂಸ್ಥೆಯೊಂದು ನಡೆಸುತ್ತಿರುವ ವಿಕಾಸ್ ಜನಸೇವಾ ಟ್ರಸ್ಟ್ ಲಾಕ್ಡೌನ್ನ ಕರಿ ನೆರಳು ಆವರಿಸಿದೆ. ಕುಟುಂಬದವರಿಂದ ನಿರ್ಲಕ್ಷಿಸಲ್ಪಟ್ಟವರಿಗೆ ಆಶ್ರಯ ನೀಡಿದ್ದ ಸಂಸ್ಥೆ ಲಾಕ್‌ಡೌನ್ ಪರಿಣಾಮವನ್ನು ಎದುರಿಸುತ್ತಿದೆ. ಸಂಸ್ಥೆ ಪ್ರಾರಂಭವಾಗಿ 5 ವರ್ಷಗಳೂ ದಾನಿಗಳು ಕೊಡುತ್ತಿದ್ದ ಆರ್ಥಿಕ ನೆರವಿನಿಂದ ನಡೆದುಕೊಂಡು ಹೋಗುತ್ತಿದ್ದ ಆಶ್ರಮವೀಗ ಸೂಕ್ತ ನೆರವಿಲ್ಲದೇ ಸಂಕಷ್ಟವನ್ನು ಎದುರಿಸುತ್ತಿದೆ.
ಲಾಕ್‌ಡೌನ್ ನಂತರದ ದಿನಗಳಿಂದ ಈ ಆಶ್ರಮಕ್ಕೆ ದಿನಸಿ ಪದಾರ್ಥಗಳು, ಅಕ್ಕಿ, ತರಕಾರಿ, ಗ್ಯಾಸ್ ಸಮರ್ಪಕ ರೀತಿಯಲ್ಲಿ ಬರುತ್ತಿಲ್ಲ. ಇದರಿಂದ 22 ವೃದ್ಧರಿರುವ ಈ ಆಶ್ರಮದಲ್ಲಿ ಸರಿಯಾದ ಪ್ರಮಾಣದಲ್ಲಿ ಊಟ ಬಡಿಸಲೂ ಮೀನಾ-ಮೇಷ ಎಣಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ ಪ್ರಸ್ತುತ ಇರುವ ಕಟ್ಟಡಕ್ಕೂ ಪ್ರತಿ ತಿಂಗಳು 15 ಸಾವಿರ ಬಾಡಿಗೆ ಪಾವತಿಸಬೇಕಿದೆ.
ಆಗಾಗ ಇಲ್ಲಿರುವ ವೃದ್ಧರಿಗೆ ವೈದ್ಯಕೀಯ ತಪಾಸಣೆಯನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾಡಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಿತರಾಗಿ ವೃದ್ಧರ ಸೇವೆಗೆ ದಾನಿಗಳು ಹಾಗೂ ಜಿಲ್ಲಾಡಳಿತ ಮುಂದಾಗಬೇಕಿದೆ ಎಂದು ಆಶ್ರಮದ ಸಂಸ್ಥಾಪಕಾ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.