ಕೊಡಗು (ಮಡಿಕೇರಿ): ದಕ್ಷಿಣದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಈ ತಾಣವೀಗ ಮತ್ತಷ್ಟು ಪ್ರೇಕ್ಷಣೀಯವಾಗಿದೆ. ಇದಕ್ಕೆ ಕಾರಣ ಮಾಂದಲಪಟ್ಟಿಯ ಗುಡ್ಡಗಳಲ್ಲಿ ಅರಳಿ ನಗು ಹೊಮ್ಮಿಸುತ್ತಿರುವ ನೀಲಿ ಕುರುಂಜಿ ಹೂವುಗಳ ರಾಶಿ. ನೀವು ಇಲ್ಲಿ ನಿಂತು ಸುಂದರ ಪರಿಸರದತ್ತ ಕಣ್ಣು ಹಾಯಿಸಿದರೆ, ನೀವು ನೋಡುವ ಅಷ್ಟೂ ದೂರ ಭೂರಮೆಗೆ ಹೊದಿಕೆಯಂತೆ ಈ ಹೂವುಗಳು ಆವರಿಸಿಕೊಂಡಿವೆ.
ಸುಮಾರು 5, 7, 12, 14 ವರ್ಷಗಳಿಗೊಮ್ಮೆ ಈ ಹೂವುಗಳ ಚೆಲುವು ನೋಡೋಕೆ ಸಿಗುತ್ತೆ. ಅಂದಹಾಗೆ ನೀಲಿ ಕುರುಂಜಿ ಒಂದು ವಾರ ಮಾತ್ರವೇ ಭೂಲೋಕದಲ್ಲಿ ಸ್ವರ್ಗ ಸೃಷ್ಟಿಸುತ್ತವೆ. ಮಡಿಕೇರಿಯ ಮಾಂದಲಪಟ್ಟಿ ಈಗ ನೀಲಿಯಾಗಿ ಗೋಚರಿಸುತ್ತಿದೆ. ಇವುಗಳ ಸೌಂದರ್ಯ ನೋಡುವುದು ಕಣ್ಣಿಗೆ ಹಬ್ಬವೇ ಸರಿ.
ವರ್ಷದ ಪ್ರತೀ ರುತುಮಾನದಲ್ಲೂ ಕೊಡಗು ಪ್ರವಾಸಿಗರಿಂದ ತುಂಬಿರುವ ಪ್ರದೇಶ. ಆದ್ರೆ ಈಗ ಮಡಿಕೇರಿಗೆ ಪ್ರವಾಸ ಬಂದವರಿಗೆ ನೀಲಿಕುರುಂಜಿ ಕಣ್ತುಂಬಿಕೊಳ್ಳುವ ಅವಕಾಶವೂ ಸಿಗುತ್ತಿದೆ. ಹೀಗಾಗಿ ಮಂಜಿನ ನಡುವೆ ನೀಲಿಕುರುಂಜಿ ಹೂಗಳ ಸೊಬಗ ಸವಿಯಲು ಸ್ಥಳೀಯರ ಜತೆ ಪ್ರವಾಸಿಗರು ಬರ್ತಿದ್ದಾರೆ. ಸದ್ಯಕ್ಕಂತೂ ಮಾಂದಲಪಟ್ಟಿ ಧರೆಗಿಳಿದ ಸ್ವರ್ಗದಂತಿದೆ. ನೀಲಿ ಕುರುಂಜಿ ಅರಳಿ ನೀಲಿ ಆಗಸ ಭೂಮಿ ಮೇಲೆ ಸೃಷ್ಟಿಯಾಗಿದೆ. ಬರೀ ಹಸಿರನ್ನೇ ತುಂಬಿಕೊಂಡಿದ್ದ ಗುಡ್ಡಗಳು ಮತ್ತಷ್ಟು ಕಲರ್‌ಫುಲ್ ಆಗಿ ಕಂಗೊಳಿಸುತ್ತಿವೆ.
ಇದನ್ನೂ ಓದಿ: ಕೋವಿಡ್ ಹತ್ತಿಕ್ಕುವ ಸಲುವಾಗಿ ಪ್ರವಾಸಿ ತಾಣಗಳಿಗೆ ವಾರಾಂತ್ಯದ ನಿಷೇಧಾಜ್ಞೆ ಜಾರಿ