ಕೊಡಗು: ಮುಂಗಾರು ಆರಂಭ ಆಯ್ತು ಅಂದ್ರೆ ಕೊಡಗು ಜಿಲ್ಲೆಯ ಜನರಿಗೆ ಆತಂಕ ಶುರುವಾಗುತ್ತದೆ. 2018, 2019ರ ಮಳೆಗಾಲದ ವೇಳೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಕಣ್ಣಮುಂದೆ ಹಾಗೆಯೇ ಅಚ್ಚಳಿಯದೆ ಉಳಿದುಬಿಟ್ಟಿದೆ. ಇದೀಗ ಕೊಡಗು ಜಿಲ್ಲೆಗೆ ಮುಂಗಾರು ಆರ್ಭಟ ಜೋರಾಗಿದ್ದು ಮಡಿಕೇರಿಯಿಂದ ಮಂಗಳೂರು ತೆರಳುವ ರಸ್ತೆಯಲ್ಲಿ ಬೆಟ್ಟ ಕುಸಿತವಾಗುತ್ತಿದೆ.
ಮಣ್ಣು ರಸ್ತೆಗೆ ಜಾರುತ್ತಿದ್ದು ಮಳೆಗಾಲ ಮುಗಿಯುವವರೆಗೆ ಮಂಗಳೂರು ರಸ್ತೆ ಸಂಚಾರವನ್ನು ನಿಲ್ಲಿಸುವಂತೆ ಶಾಸಕ ಕೆ.ಜಿ ಬೋಪಯ್ಯ ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ. ಮಡಿಕೇರಿಯ ಸಮೀಪದ ಕೊಂಡಗೇರಿ ಗ್ರಾಮದ ಬಳಿ ಕಳೆದ ಬಾರಿ ಭಾರಿ ಪ್ರಮಾಣದ ಬೆಟ್ಟ ಕುಸಿತವಾಗಿತ್ತು. ನಾಲ್ಕು ಜನರು ಸೇರಿದಂತೆ 5 ಮನೆಗಳು ಮಣ್ಣಿನಲ್ಲಿ ಸಿಲುಕಿದ್ದವು. ರಸ್ತೆ ಕೊಚ್ಚಿ ಹೋಗಿತ್ತು. ಆ ಬಳಿಕ ಕುಸಿತವಾದ ರಸ್ತೆಯನ್ನು ಸರಿಮಾಡಲಾಗಿತ್ತು.
ಆದರೆ ಇದೀಗ ಮಂಗಳೂರು ರಸ್ತೆಗೆ ತಡೆಗೋಡೆ ಇರುವ ಕಡೆ ಮಣ್ಣು ಜಾರುತ್ತಿಲ್ಲ. ಹೊರತಾಗಿ ತಡೆಗೋಡೆ ಪಕ್ಕದಲ್ಲಿ ಮಣ್ಣು ಕುಸಿಯುತ್ತಿದ್ದು, ಮಂಗಳೂರು ರಸ್ತೆಗೆ ಬರುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಮಂಗಳೂರು ರಸ್ತೆ ಸಂಚಾರವನ್ನು ಬಂದ್ ಮಾಡುವಂತೆ ಶಾಸಕರು ಹೇಳಿದ್ದಾರೆ.
ಮಳೆಗಾಲದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಲ್ಲಿಸಿದ್ದರೂ ಸಹ ಕದ್ದು ಮುಚ್ಚಿ ಬೃಹತ್ ಟ್ರಕ್ಗಳು ಮತ್ತು 16 ಚಕ್ರದ ಲಾರಿಗಳು ಸಂಚಾರ ಮಾಡುತ್ತಿವೆ. ಇದು ರಸ್ತೆ ಕುಸಿಯುವುದಕ್ಕೂ ಕಾರಣವಾಗಿದೆ. ಹೀಗಾಗಿ ವಾಹನಗಳ ಸಂಚಾರ ನಿಲಿಸಿದ್ರೆ ಮಾತ್ರ ರಸ್ತೆ ಉಳಿಯುತ್ತದೆ ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿ ಮನೆಯೊಂದು ನೋಡ ನೋಡುತ್ತಿದಂತೆ ಕುಸಿತವಾಗಿದೆ. ವಿರಾಜಪೇಟೆ ಭಾಗಮಂಡಲ ಭಾಗದಲ್ಲಿ ಅಲ್ಲಲ್ಲಿ ರಸ್ತೆ ಕುಸಿತವಾಗುತ್ತಿವೆ. ನದಿಪಾತ್ರದ ಜನರು ಆತಂಕದಲ್ಲಿ ಜೀವನ ಮಾಡುತ್ತಿದ್ದಾರೆ. ಜಿಲ್ಲೆಯ ಹಲವಾರು ಭಾಗದಲ್ಲಿ ಅಪಾಯದ ಪ್ರದೇಶಗಳನ್ನು ಗುರುತು ಮಾಡಿದ್ದು, ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.