ಕೊಡಗು: ಕಳೆದ ವರ್ಷದ ಮಳೆಯ ಅವಾಂತರದಿಂದ ಮಳೆ ಅಂದರೆ ಸಾಕು ಕೊಡಗಿನ ಜನ ಭಯ ಪಡುತ್ತಿದ್ದರು. ಆದರೆ ಈ ವರ್ಷ ಮಾತ್ರ ಮಳೆ ಕೊರತೆಯಿಂದಾಗಿ ಜಿಲ್ಲೆಯ ಏಕೈಕ ಹಾರಂಗಿ ಜಲಾಶಯ ಬರಿದಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಹೌದು..ಇಂತಹದ್ದೊಂದ್ದು ದೃಶ್ಯಗಳಿಗೆ ಸಾಕ್ಷಿಯಾಗಿರುವುದು ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಹಾರಂಗಿ ಜಲಾಶಯ. ಕಳೆದ ಬಾರಿ ಭೀಕರ ಮಳೆಯಿಂದ ಅತಿವೃಷ್ಟಿ ಸೃಷ್ಟಿಯಾಗಿತ್ತು. ಇದೀಗ ಇಲ್ಲಿನ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಇದೀಗ ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿರೋದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
ಕಳೆದ ವರ್ಷ ಇಂದಿನ ದಿನಕ್ಕೆ ಹೋಲಿಸಿದರೆ ಕೊಡಗಿನಲ್ಲಿ ಏನೇನೂ ಮಳೆ ಆಗಿಲ್ಲ. ಇದರ ಪರಿಣಾಮದಿಂದ ಹಾರಂಗಿ ಜಲಾಶಯದಲ್ಲಿ ನೀರು ಸಂಗ್ರಹಣೆ ಆಗಿಲ್ಲ. ಕಳೆದ ಬಾರಿ ಈ ಸಮಯಕ್ಕೆ ಬರೋಬ್ಬರಿ ಸಾವಿರ ಮಿ.ಮೀ. ಮಳೆಯಾಗಿತ್ತು. ಪರಿಣಾಮ ಹಾರಂಗಿ ಜಲಾಶಯಕ್ಕೆ 3.5 ಟಿಎಂಸಿ ನೀರು ಹರಿದು ಬಂದಿತ್ತು. ಆದರೆ ಈ ವರ್ಷ ಇದುವರೆಗೆ ಕೇವಲ 200 ಮಿ.ಮೀ. ಮಾತ್ರವೇ ಮಳೆಯಾಗಿದೆ. ಪರಿಣಾಮ ಕೇವಲ 277 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಲ್ಲಿ ಕೇವಲ 1.5 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಈ ಮೂಲಕ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 2 ಟಿಎಂಸಿ ನೀರು ಕಡಿಮೆ ಇದೆ. ಜಲಾಶಯದಲ್ಲಿ ನೀರು ಡೆಡ್ ಸ್ಟೋರೆಜ್ ತಲುಪಿದೆ.
ಹಾರಂಗಿ ಜಲಾಶಯದ ನೀರನ್ನ ಮೈಸೂರು, ಹಾಸನ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ರೈತರು ಅವಲಂಬಿಸಿದ್ದಾರೆ. ಜಲಾಶಯದಲ್ಲಿ ನೀರು ಕಡಿಮೆ ಆಗಿರುವುದರಿಂದ ವಿದ್ಯುತ್ ಉತ್ಪಾನೆಗೂ ಹಿನ್ನಡೆಯಾಗಿದೆ. ಹಾರಂಗಿ ಜಲಾಶಯದ ನೀರು ನಂಬಿಕೊಂಡಿರುವ ರೈತರು ಆತಂಕದಲ್ಲಿದ್ದಾರೆ. ಕಳೆದ ಬಾರಿಯ ಜಲ ಪ್ರಳಯದಿಂದ ಜಲಾಶಯ ಬಹುತೇಕ ಹೂಳಿನಿಂದ ತುಂಬಿದೆ. ಹೂಳು ತುಂಬಿರುವ ಜಲಾಶಯದಲ್ಲಿ ಕಡಿಮೆ ನೀರು ಸಂಗ್ರಹವಾಗುತ್ತೆ. ಹೀಗಾಗಿಯೇ ಜಲಾಶಯದಲ್ಲಿ ಹೂಳು ತೆಗೆಯಬೇಕು ಎನ್ನುವ ಕೂಗು ಪ್ರತಿಧ್ವನಿಸಿತ್ತು. ಅದಕ್ಕೆ ಸರ್ಕಾರ ಕೂಡ ಅಸ್ತು ಎಂದಿತ್ತು.
ಹಾರಂಗಿ ಜಲಾಶಯ ಕೊಡಗಿಗಿಂತ ಕೆಆರ್‌ಎಸ್ ಅವಲಂಭಿಸಿರುವ ಜನರಿಗೆ ಹೆಚ್ಚು ಉಪಯೋಗಕರವಾಗಿದ್ದು, ಇಲ್ಲಿ ನೀರು ಸಂಗ್ರಹಣೆ ಕಡಿಮೆಯಾದರೆ ಇದರ ಪರಿಣಾಮ ಕಾವೇರಿ ನೀರನ್ನು ನಂಬಿರುವ ನದಿ ಪಾತ್ರದ ಜನರಿಗೂ ತಟ್ಟಲಿದೆ. ಅಷ್ಟೇ ಅಲ್ಲದೆ ಇದೇ ಪರಿಸ್ಥಿತಿ ಮುಂದುವರೆದರೆ ಕುಡಿಯುವ ನೀರಿಗೂ ಕೂಡ ಸಮಸ್ಯೆ ಎದುರಾಗುತ್ತದೆ. ಕಳೆದ ಬಾರಿ ಈ ಸಮಯಕ್ಕೆ ಜಲಾಶಯದಲ್ಲಿ 5 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಆದರೆ ಈ ವರ್ಷ ಮಳೆ ಕೊರತೆಯಿಂದ ಜಲಾಶಯಕ್ಕೆ ನೀರು ಬಂದಿಲ್ಲ. ಇದರಿಂದ ಮಳೆಯನ್ನೇ ನಂಬಿ ವ್ಯವಸಾಯ ಮಾಡುವವರೂ ತೊಂದರೆ ಅನುಭವಿಸುತ್ತಿದ್ದಾರೆ.
ಸುತ್ತಲ ಕೊಳವೆ ಬಾವಿಗಳು ನಿಂತಿವೆ. ಜನ-ಜಾನುವಾರುಗಳಿಗೂ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಮಳೆ ಕೊರತೆ ಎದುರಾದರೆ ಜಿಲ್ಲಾಡಳಿತ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಿ ಎನ್ನುತ್ತಾರೆ ಸಾರ್ವಜನಿಕರು.