ಕೊಡಗು: ಹಿಂದೆ ಕಾಂಗ್ರೆಸ್ ಸರ್ಕಾರ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಘೋಷಿಸಿದ್ದ ಟಿಪ್ಪು ಜಯಂತಿ ಆಚರಣೆ ಕೊಡಗು ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯದಾದ್ಯಂತ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಶಾಲಾ ಪಠ್ಯಪುಸ್ತಕದಲ್ಲಿ ಇರುವ ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯವನ್ನು ತೆಗೆದು ಹಾಕಲು ಸಿಎಂ ಬಿ.ಎಸ್. ಯಡಿಯೂರಪ್ಪ ಸಮ್ಮತಿ ಹಾಗೂ ನಿರ್ಧಾರ ಮಾಡಿರುವುದನ್ನು ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ಸ್ಥಳೀಯರು ಸ್ವಾಗತಿಸಿದ್ದಾರೆ.
ಟಿಪ್ಪು ಜಯಂತಿಯನ್ನು ನಮ್ಮೆಲ್ಲರ ಮನವಿ ಮೇರೆಗೆ ರಾಜ್ಯ ಸರ್ಕಾರ ರದ್ದು ಮಾಡಿದೆ. 7ನೇ ತರಗತಿಯ ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಇತಿಹಾಸ ಇತ್ತು. ಅದನ್ನು ತೆಗೆಯಲು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿದ್ದರು. ಸರ್ಕಾರ ಅದಕ್ಕೆ ತಕ್ಷಣ ಸ್ಪಂದಿಸುವ ಕೆಲಸ ಮಾಡಿರುವುದು ಸ್ವಾಗತಾರ್ಹ. ಟಿಪ್ಪು ಸುಲ್ತಾನ್ಗೆ ನಾಡಿನ ಬಗ್ಗೆ ಆಭಿಮಾನವೂ ಇರಲಿಲ್ಲ. ಪುಸ್ತಕದಲ್ಲಿ ಬಿಂಬಿಸಿದ ಹಾಗೆ ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ. ಆತ ಕೊಡವರು ಸೇರಿದಂತೆ ಕ್ರೈಸ್ತರಿಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾನೆ. ಟಿಪ್ಪು ದರೋಡೆ ಮಾಡಿದ್ದಾನೆ ಹಾಗೂ ದೇವಾಲಯಗಳನ್ನು ನಾಶ ಮಾಡಿದ್ದಾನೆ. ಟಿಪ್ಪು ತನ್ನ ರಾಜ್ಯ ಉಳಿಸಿಕೊಳ್ಳಲು ಹೋರಾಟ ಮಾಡಿದ್ದಾನೆ ಅಷ್ಟೇ. ಮತಾಂಧ ಟಿಪ್ಪುವಿನ ಇತಿಹಾಸ ಪಠ್ಯ ಪುಸ್ತಕದಲ್ಲಿರಲು ಅರ್ಹವಲ್ಲ. ನಮಗೂ ಕೂಡ ಟಿಪ್ಪು ಮೈಸೂರು ಹುಲಿ ಅಂತ ಪಠ್ಯ ಪುಸ್ತಕದಲ್ಲಿತ್ತು. ನಂತರ ನಮಗೆ ಗೊತ್ತಾಗಿದ್ದು ಆತ ಮೈಸೂರು ಹುಲಿ ಅಲ್ಲ, ಗುಳ್ಳೆನರಿ ಅಂತ. ಅಂತಹ ಟಿಪ್ಪು ಇತಿಹಾಸ ಮಕ್ಕಳಿಗೆ ಕಲಿಸಿದ್ರೆ ಮಕ್ಕಳ ಭವಿಷ್ಯ ಏನಾಗಬಹುದು ಎಂದು ವಿರಾಜಪೇಟೆಯಲ್ಲಿ ಶಾಸಕ ಹಾಗೂ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಟಿಪ್ಪು ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆಯುವ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಪ್ರತಿಕ್ರಿಯಿಸಿ, ಸಿಎಂ ಯಡಿಯೂರಪ್ಪ ನಿರ್ಧಾರವನ್ನು ಕೊಡವರು ಸ್ವಾಗತಿಸುತ್ತೇವೆ. ಟಿಪ್ಪು ನಮ್ಮ ಸಮುದಾಯದ ಮೇಲೆ ದೌರ್ಜನ್ಯ ಮಾಡಿದ್ದಾನೆ. ಆತನ ಬಗ್ಗೆ ಪಠ್ಯಪುಸ್ತಕದಲ್ಲಿ ವೈಭವೀಕರಿಸಿದ್ದಕ್ಕೆ ನಮ್ಮ ವಿರೋಧ ಇತ್ತು. ಸದ್ಯ ಸರ್ಕಾರ ಆತನ ಇತಿಹಾಸವನ್ನು ಪುಸ್ತಕದಿಂದ ತೆಗೆಯಲು ಮುಂದಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ನಾವು ಶ್ಲಾಘಿಸಿ, ಸ್ವಾಗತಿಸುತ್ತೇವೆ ಎಂದಿದ್ದಾರೆ.
ಟಿಪ್ಪು ಓರ್ವ ಮತಾಂಧ. ಆತನಿಂದ ದೌರ್ಜನ್ಯಕ್ಕೆ ಒಳಗಾದವರ ಮಕ್ಕಳು ಆತನ ಇತಿಹಾಸ ಓದುವುದಿಲ್ಲ. ಪಠ್ಯಪುಸ್ತಕದಿಂದ ಆತನ ಇತಿಹಾಸ ತೆಗೆಯಲು ಮುಂದಾಗಿರೋದು ಒಳ್ಳೆಯ ನಿರ್ಧಾರ ಎಂದು ಸಾಮಾಜಿಕ ಯುವ ಹೋರಾಟಗಾರ ಸತ್ಯ ಎಂಬುವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.