ಕೊಡಗು: ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಕೊಡಗಿಗೆ ಅನ್‍ಲಾಕ್ ಭಾಗ್ಯ ಸಿಕ್ಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಜಿಲ್ಲೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಕೊಡಗಿನ ಗಡಿಯಲ್ಲಿ ತಪಾಸಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತೆ. ಹೊರ ಜಿಲ್ಲೆ, ರಾಜ್ಯದಿಂದ ಆಗಮಿಸಿರುವವರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅನ್‍ಲಾಕ್ ನಿಯಮಾವಳಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜುಲೈ 19 ರ ಬೆಳಗ್ಗೆ 6 ಗಂಟೆಯವರೆಗೆ ಜಾರಿಗೊಳಿಸಲಾಗಿದೆ. ಕಂಟೈನ್‌ಮೆಂಟ್ ವಲಯದಲ್ಲಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಸರ್ಕಾರದ ಮಾರ್ಗಸೂಚಿಗೊಳಪಟ್ಟು ಗರಿಷ್ಠ 20 ಮಂದಿ ಮೀರದಂತೆ ಅಂತ್ಯಕ್ರಿಯೆ/ಶವಸಂಸ್ಕಾರ ನಡೆಸಬಹುದು ಎಂದು ಅವರು ತಿಳಿಸಿದ್ದಾರೆ.
ಗರಿಷ್ಠ 100 ಮಂದಿ ಮೀರದಂತೆ ಮದುವೆ, ಕೌಟುಂಬಿಕ ಸಮಾರಂಭ, ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದೆ. ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ. ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಎಲ್ಲಾ ಶೈಕ್ಷಣಿಕ ಸಂಸ್ಥೆಗಳು/ಟ್ಯುಟೋರಿಯಲ್ಸ್/ಕಾಲೇಜುಗಳು ಸರ್ಕಾರದ ಮುಂದಿನ ಆದೇಶದವರೆಗೆ ಮುಚ್ಚಲ್ಪಟ್ಟಿರುತ್ತದೆ. ತರಬೇತಿ ಉದ್ದೇಶಕ್ಕಾಗಿ ಮಾತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂಗಳನ್ನು ತೆರೆಯಬಹುದು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಆದೇಶ ಹೊರಡಿಸಿದ್ದಾರೆ.