ಕೊಡಗು: ಕೊರೊನಾ ಮಹಾಮಾರಿಯಿಂದ ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ ಪ್ರವಾಹದಲ್ಲಿ ಮನೆ ಮಠಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಸಂತ್ರಸ್ತರು ಇದೀಗ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಕುಂಬಾರಗುಂಡಿ ಬರಡಿ, ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ ಸೇರಿದಂತೆ ಹಲವು ಗ್ರಾಮಗಳ ಸಾವಿರಾರು ಕುಟುಂಬಗಳು ಕನಿಷ್ಟ ಊಟಕ್ಕೂ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ.
ಕೇವಲ ಕೂಲಿ ನಂಬಿ ಬದುಕುತ್ತಿದ್ದ ಸಂತ್ರಸ್ಥರ ಸ್ಥಿತಿ ಶೋಚನೀಯವಾಗಿದೆ. ಇದ್ದ ಮನೆಯೂ ಪ್ರವಾಹದಲ್ಲಿ ಕೊಚ್ಚಿ ಹೋಗಿ ಬೀದಿಪಾಲಾಗಿದ್ದ, ಇವರಿಗೆ ಕನಿಷ್ಟ ಒಪ್ಪೊತ್ತಿನ ಊಟಕ್ಕೂ ಏನು ಮಾಡಬೇಕೆಂದು ತೋಚದಾಗಿದೆ. ಕೈಯಲ್ಲಿದ್ದ ಹಣ ಖರ್ಚಾಗಿದ್ದು, ಸಾಲ ಮಾಡಿ ಇಷ್ಟು ದಿನ ಬದುಕಿದ್ದೇವೆ. ಇನ್ನು ಮುಂದಿನ ಸ್ಥಿತಿ ಏನು? ಎಂಬ ಆತಂಕ ಎದುರಾಗಿದೆ. ಸರ್ಕಾರದಿಂದ 20 ಕೆ.ಜಿ. ಅಕ್ಕಿ ಬಿಟ್ಟರೆ ಮತ್ತೇನನ್ನೂ ಕೊಟ್ಟಿಲ್ಲ. ಹೀಗೆ ಮುಂದುವರೆದರೆ ನಮ್ಮ ಸ್ಥಿತಿ ದುಸ್ತರವಾಗಲಿದೆ ಅನ್ನೋದು ಸಂತ್ರಸ್ಥರ ಅಳಲು.
ಇದು ಒಂದೆಡೆಯಾದ್ರೆ ಮತ್ತೊಂದೆಡೆ ಪುನಃ ಮಳೆಗಾಲ ಆರಂಭವಾಗುತ್ತಿದ್ದು, ಇಂದಿಗೂ ಮನೆಗಳ ನಿರ್ಮಾಣ ಕಾರ್ಯವಾಗಿಲ್ಲ. ನಾವು ಮುಂದೆ ಜೀವನ ಸಾಗಿಸುವುದಾದ್ರೂ ಹೇಗೆ? ಎಂದು ಆತಂಕದಲ್ಲಿದ್ದಾರೆ. ಪ್ರವಾಹ ಇಳಿದು ಹಲವು ತಿಂಗಳ ಬಳಿಕ ಸರ್ಕಾರ ಸಂತ್ರಸ್ತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿತ್ತು. ಆದ್ರೆ ಕೊರೊನಾದಿಂದಾಗಿ ಇದೀಗ ಯಾವುದೇ ಕೆಲಸಗಳಾಗದೆ ಸಂತ್ರಸ್ಥರ ಮನೆಗಳ ನಿರ್ಮಾಣ ಕಾರ್ಯವೂ ಸ್ಥಗಿತಗೊಂಡಿದೆ.