ಕೊಡಗು: ಒಂಟಿ ಮಹಿಳೆ ವಾಸಿಸುತ್ತಿದ್ದ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಪ್ರಕರಣ ಭೇದಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕೃತ್ಯ ನಡೆದ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ವಿಕಾಸ್ (33) ಬಂಧಿತ ಆರೋಪಿ.
ಮಡಿಕೇರಿಯ ಕಾಲೇಜು ರಸ್ತೆಯ ಐಡಿಬಿಐ ಬ್ಯಾಂಕ್ ಎದುರಿನಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಸಿ.ಪ್ರಭಾಕರ್ ಎಂಬವರಿಗೆ ಸೇರಿದ ಮನೆಯಲ್ಲಿ ದರೋಡೆ ಯತ್ನ ಹಾಗು ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣ ದಾಖಲಾಗಿತ್ತು. ಪ್ರಭಾಕರ್ ವಾಕಿಂಗ್‌ಗೆ ಹೋಗಿದ್ದ ಸಂದರ್ಭದಲ್ಲಿ ಪತ್ನಿ ಸಾಕಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದಾನೆ. ಬಳಿಕ ಕೊರಳಲ್ಲಿದ್ದ ಸುಮಾರು 27 ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ.
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗಿತ್ತು. ಆರೋಪಿ ಮನೆಗೆ ಬಂದು ಹೋಗಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಆಧಾರದ ಮೇಲೆ ರೆಸಾರ್ಟ್, ಹೋಟೆಲ್ಗಳಲ್ಲಿ ಕೆಲಸ ಮಾಡುವ ವ್ಯಕ್ತಿ ಇರಬೇಕೆಂದು ಶಂಕೆ ವ್ಯಕ್ತಪಡಿಸಿ ಎಲ್ಲೆಡೆ ಶೋಧ ನಡೆಸಲಾಗಿತ್ತು.
ಈ ನಡುವೆ ರೆಸಾರ್ಟ್ವೊಂದರ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಹುಡುಕಾಟ ನಡೆಸಿ ಉತ್ತರ ಭಾರತ ಮೂಲದ ರಾಜಸ್ಥಾನದಿಂದ ಕೆಲಸಕ್ಕೆಂದು ಬಂದಿದ್ದ ವಿಕಾಸ್ ಎಂಬಾತನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದೇವೆ ಎಂದು ಕೊಡಗು ಜಿಲ್ಲಾ ಎಸ್ಪಿ ಕೆ.ರಾಮರಾಜನ್ ಮಾಹಿತಿ ನೀಡಿದರು.
ಇದನ್ನೂ ಓದಿ: ಮಂಡ್ಯ: ಹಾಡಹಗಲೇ ಕಾರಿನ ಗ್ಲಾಸ್ ಒಡೆದು ₹4.5 ಲಕ್ಷ ಎಗರಿಸಿ ಕಳ್ಳರು ಪರಾರಿ