ಸೋಮವಾರಪೇಟೆ (ಕೊಡಗು): ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಮೃತಪಟ್ಟಿದ್ದು, ಇದುವರೆಗೆ ಸೊಂಕಿನಿಂದ 14 ಜನರು ಮೃತಪಟ್ಟಿದ್ದಾರೆ. ಸೋಮವಾರಪೇಟೆ ತಾಲೂಕಿನ ಮಾದಾಪುರದ 65 ವರ್ಷದ ಮಹಿಳೆ ಹಾಗೂ ವಿರಾಜಪೇಟೆ ತಾಲೂಕು ತಿತಿಮತಿ ಗ್ರಾಮದ ನಿವಾಸಿ ಕೊರೊನಾ ಸೋಂಕಿಗೆ ಮೃತಪಟ್ಟವರು.
ಮಾದಾಪುರದ ಮಹಿಳೆ ಕಳೆದ 4 ವರ್ಷಗಳಿಂದ ರಕ್ತದ ಒತ್ತಡದಿಂದ ಬಳಲುತ್ತಿದ್ದರು. ಅಲ್ಲದೆ 3 ದಿನಗಳ ಹಿಂದೆಯಷ್ಟೇ ಇವರಿಗೆ ಕೆಮ್ಮು ಕಾಣಿಸಿಕೊಂಡಿತ್ತು. ಬಳಿಕ ಗಂಟಲ ದ್ರವವನ್ನು ಪರೀಕ್ಷಿಸಿದಾಗ ಸೊಂಕು ದೃಢಪಟ್ಟಿದ್ದರಿಂದ ಅವರನ್ನು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ವಿರಾಜಪೇಟೆ ತಾಲೂಕು ತಿತಿಮತಿ ಗ್ರಾಮದ 36 ವರ್ಷದ ವ್ಯಕ್ತಿ ಕೊರೊನಾಕ್ಕೆ ಬಲಿಯಾಗಿದ್ದು, ಇವರು ರಕ್ತದ ಒತ್ತಡ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಆಗಸ್ಟ್ 7ರಂದು ಇವರಿಗೆ ಕೊರೊನಾ ದೃಢಪಟ್ಟಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಕೋವಿಡ್ ಮಾರ್ಗಸೂಚಿಯಂತೆ ಜಿಲ್ಲಾಡಳಿತದಿಂದ ಅಂತ್ಯಕ್ರಿಯೆ ನೆರವೇರಲಿದೆ.