ಕೊಡಗು: ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಭೀಕರವಾಗಿ ಯುದ್ಧ ನಡೆಯುತ್ತಿದೆ. ಯುದ್ಧ ಪರಿಣಾಮದಿಂದ ಅಲ್ಲಿನ ಜನರು ತತ್ತರಿಸಿ ಹೋಗುತ್ತಿದ್ದಾರೆ. ಅಲ್ಲದೇ ನಮ್ಮ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಕ್ಕಿಕೊಂಡು ನಲಗುತ್ತಿದ್ದು, ಆಹಾರವಿಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ ಎಂಬ ಮನಮಿಡಿಯುವ ವಿಡಿಯೋ ಮಾಡಿ ಕಳುಹಿಸಿದ್ದಾರೆ.
ಉಕ್ರೇನ್ನಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗಿರುವ ಕನ್ನಡಿಗರು ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಯುದ್ಧದಿಂದ ನಿರ್ಮಾಣವಾಗಿದೆ. ಖಾರ್ಕಿವ್ ನಗರದಲ್ಲಿರುವ ಕೊಡಗಿನ ಕುಶಾಲನಗರದ ಚಂದನ್ಗೌಡ ಸೇರಿದಂತೆ ರಾಜ್ಯದ ಬೇರೆ - ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕಟ್ಟಡ ತಳಭಾಗದಲ್ಲಿ ಇದ್ದಾರೆ. ಅವರೆಲ್ಲ ಅಲ್ಲಿನ ಪರಿಸ್ಥಿತಿ ಹಾಗೂ ಅವರಿಗೆ ಆಗುತ್ತಿರುವ ಅನುಭವದ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದಾರೆ.
ತಮ್ಮ ಪರಿಸ್ಥಿತಿ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ಕಟ್ಟಡದ ನೆಲ ಮಹಡಿಯಲ್ಲಿರುವ ನಮಗೆ ಸರಿಯಾದ ವಿದ್ಯುತ್, ಆಹಾರ ಇಲ್ಲ. ಇದರಿಂದ ನಮ್ಮ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಇಷ್ಟು ದಿನ ಇದ್ದ ಆಹಾರಗಳನ್ನು ಬಳಸಿಕೊಂಡು ಇದ್ದೆವು. ಆದರೆ ಇದೀಗ ಆಹಾರ ಇಲ್ಲದೇ ಚಾಕೊಲೇಟ್ ತಿನ್ನುತ್ತ ದಿನ ಕಳೆಯುತ್ತಿದ್ದೇವೆ. ಗ್ಯಾಸ್ ಸಿಲಿಂಡರ್ ಇರುವ ಕಟ್ಟಡ ಕೆಳಭಾಗದಲ್ಲಿ ನಾವು ಇದ್ದೇವೆ. ಕಟ್ಟಡ ಶೇಕ್ ಅಗುವುದರಿಂದ ಜೀವ ಭಯ ಕಾಡುತ್ತಿದೆ. ಅದಷ್ಟು ಬೇಗ ಭಾರತ ಸರ್ಕಾರ ನಮ್ಮನ್ನು ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.