ಕೊಡಗು: ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಜಿಲ್ಲೆಯ ಗಡಿ ಭಾಗದ ಕೊಹಿನಾಡಿನ ಕಿಂಡಿ ಅಣೆಕಟ್ಟೆಯಿಂದ ಈ ಭಾಗದ ಜನರಿಗೆ ಸಮಸ್ಯೆಯಾಗಿದೆ. ಆದರೆ ಜನರ ಸಮಸ್ಯೆ ಆಲಿಸಬೇಕಾದ ರಾಜಕೀಯ ಮುಂಖಡರು ಮಾತ್ರ ಸಮಸ್ಯೆಗಳನ್ನು ಸಮಾಧಿ ಮಾಡಿ ತಮ್ಮ ಪಕ್ಷದ ಬೇಳೆ ಬೇಯಿಸಿಕೊಳ್ಳಲು ಕೆಸರೆರಾಚಾಡುತ್ತಿದ್ದಾರೆ. ಇತ್ತ ನಿರಾಶ್ರಿತರು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಮಡಿಕೇರಿ ತಾಲೂಕಿನ ಗಡಿಭಾಗ ಸಂಪಾಜೆ ಬಳಿಯ ಕೊಹಿನಾಡು ಕಿಂಡಿ ಅಣೆಕಟ್ಟೆ ಮೇಲ್ಬಾಗದಲ್ಲಿ ಪ್ರದೇಶದಲ್ಲಿ ಜಲ ಪ್ರಳಯವಾಗಿದೆ. ಪರಿಣಾಮ ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟೆಗೆ ಬಂದು ನೀರು ಹರಿಯದಂತೆ ತಡೆದು ಗ್ರಾಮಕ್ಕೆ ನೀರು ನುಗ್ಗಿ ಹಲವು ಮನೆಗಳು ನೆಲಸಮವಾಗಿದ್ದವು. ಬಳಿಕ ಜಿಲ್ಲಾಡಳಿತ ಅಣೆಕಟ್ಟೆಯಲ್ಲಿ ತಡೆಯಾಗಿದ್ದ ಮರದ ದಿಮ್ಮಿಗಳನ್ನು ತೆಗೆಸಿದ ನಂತರ ನೀರು ಸರಾಗವಾಗಿ ಹರಿದು ಹೋಗಿತ್ತು. ಆದರೆ ಜನರ ಸಮಸ್ಯೆ ಕೇಳಿ ಪರಿಹಾರ ಹುಡುಕಬೇಕಾದ ರಾಜಕೀಯ ಮುಖಂಡರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ದಯಾಮರಣ ಕೋರಿ ಪ್ರಧಾನಿಗೆ ಪತ್ರ: ಬಿಜೆಪಿ ಮುಖಂಡರು ಅಣೆಕಟ್ಟೆಯಿಂದ ಅನುಕೂಲವಾಗಿದೆ ಎನ್ನುತ್ತಿದ್ದರೆ, ಇತ್ತ ಕಾಂಗ್ರೆಸ್ ಮುಂಖಡರು ಮತ್ತು ನಿರಾಶ್ರಿತರು ಅವೈಜ್ಞಾನಿಕ ಅಣೆಕಟ್ಟೆಯಿಂದ ಜನರಿಗೆ ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ. ಇದರಿಂದ ಸಮಸ್ಯೆಗೆ ಪರಿಹಾರ ಸಿಗದೆ ಸಂತ್ರಸ್ತರು ಕಿಂಡಿ ಅಣೆಕಟ್ಟು ತೆರವು ಮಾಡಿ ಇಲ್ಲವೇ ದಯಾಮರಣ ನೀಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕಿಂಡಿ ಅಣೆಕಟ್ಟೆಯಿಂದ ಪ್ರವಾಹ ಉಂಟಾಗಿ ಹಲವು ಮನೆಗಳು, ಸಾಕು ಪ್ರಾಣಿಗಳು ನೀರುಪಾಗಿದ್ದವು. ಮನೆಗಳು ಇಲ್ಲದೆ ನಿರಾಶ್ರಿತರ ಕೇಂದ್ರದಲ್ಲಿ ಜೀವನ ಕಳೆದಿದ್ದರು. ಆದರೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಉಪಾಧ್ಯಾಯ ಅವರು ಅಣೆಕಟ್ಟೆಯಿಂದ ಯಾವುದೇ ಸಮಸ್ಯೆಯಾಗಿಲ್ಲ. ಜನರಿಗೆ ಅನುಕೂಲವಾಗಿದೆ ಎಂದು ಹೇಳುತ್ತಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಹಿನಾಡು ಗ್ರಾಮದ ಕುಟುಂಬಗಳಿಗೆ ಜಾಗ ಗುರುತು ಮಾಡಲಾಗಿದೆ. ಆದರೆ ಅವರು ಯಾರು ಬರುತ್ತಿಲ್ಲ ಎಂದು ಸ್ಥಳೀಯರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಬಿಜೆಪಿ ಮುಖಂಡರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಯಾವ ಜಾಗವನ್ನು ಗುರುತು ಮಾಡಿಲ್ಲ. ಸುಳ್ಳು ಹೇಳುತ್ತಾರೆ. ಸಮಸ್ಯೆಯಾಗಿರುವುದು ಶಾಸಕರಿಗೂ ಗೊತ್ತಿದೆ. ಈ ಭಾಗದ ಜನರ ವಿರೋಧದ ನಡುವೆ ಅಣೆಕಟ್ಟು ಕಟ್ಟಲಾಗಿದೆ. ನಮ್ಮಗೆ ಸೇತುವೆ ಬೇಕು ಅಂತಾ ಮನವಿ ಮಾಡಿದ್ದು. ಆದರೆ ಅಣೆಕಟ್ಟು ಕಟ್ಟಿ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಕಿಂಡಿ ಅಣೆಕಟ್ಟೆಯಿಂದ ಸಮಸ್ಯೆಯಾಗಿದೆ. ಆದರೂ ಉಪಯೋಗವಾಗಿದೆ ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ ಸಂತ್ರಸ್ತರು ಮುಂದಿನ ಮಳೆಗಾಲದೊಳಗೆ ಸ್ಥಳಕ್ಕೆ ತಜ್ಞರ ತಂಡವನ್ನು ಕರೆಯಿಸಿ ಅನುಕೂಲ ಅನಾನುಕೂಲ ಬಗ್ಗೆ ತನಿಖೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೊಡಗು ಗಡಿ ಭಾಗದಲ್ಲಿ ಧಾರಾಕಾರ ಮಳೆ: ಗ್ರಾಮಸ್ಥರಿಗೆ ಸಂಕಷ್ಟ