ಕೊಡಗು: ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ಕೊಡದಿರುವ ಬಗ್ಗೆ ಕೊಡಗಿನ ಜನತೆಗೆ ಅಸಮಾಧಾನವಿದ್ದು, ಒಂದು ವೇಳೆ ಸಚಿವ ಸ್ಥಾನ ಕೊಟ್ಟರೆ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಶಾಸಕ ಕೆ.ಜಿ.ಬೋಪಯ್ಯ ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಇದುವರೆಗೂ ಪಕ್ಷದ ಘನತೆಗೆ ಕುಂದು ಬರುವಂತೆ ನಡೆದುಕೊಂಡಿಲ್ಲ. ಪಕ್ಷ ಏನು ಹೇಳುತ್ತೆ ಅದನ್ನ ಕೇಳುವೆ. ಪಕ್ಷ ಜವಾಬ್ದಾರಿ ಕೊಟ್ಟಾಗ ವೈಯುಕ್ತಿಕ ಪ್ರತಿಷ್ಠೆ ಪಕ್ಕಕ್ಕಿಟ್ಟು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ಸಚಿವ ಸ್ಥಾನಕ್ಕಾಗಿ ಎಂದೂ ಲಾಬಿ ಅಥವಾ ಮತ್ತೊಂದನ್ನು ನಾನು ಮಾಡುವುದಿಲ್ಲ ಎಂದರು.
ನಾವು ಇಂದು ಎಂತಹ ಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎಂಬುದು ಗೊತ್ತಿದೆ. ಸಂಪುಟದಲ್ಲಿ 34 ಜನರಿಗೆ ಮಾತ್ರ ಮಂತ್ರಿ ಸ್ಥಾನ ಕೊಡುವ ಅವಕಾಶವಿದೆ. ಒಂದು ವೇಳೆ ಸಚಿವ ಸ್ಥಾನ ಕೊಟ್ಟರೂ ಅಥವಾ ಕೊಡದೇ ಇದ್ದರೂ ಸಮರ್ಥವಾಗಿ ನಿಭಾಹಿಸುವೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಅಭಿಪ್ರಾಯ ವ್ಯಕ್ತಪಡಿಸಿದರು.