ಕೊಡಗು: ಲಕ್ಷಾಂತರ ಜನರ ದಾಹ ನೀಗಿಸುವ ಕಾವೇರಿ ನದಿಗೆ ತವರು ನಾಡಲ್ಲೇ ಚರಂಡಿ ಹಾಗೂ ಕಲುಷಿತ ನೀರನ್ನು ನೇರವಾಗಿ ಬಿಟ್ಟು ನದಿಯನ್ನು ಮಾಲಿನ್ಯಗೊಳಿಸಲಾಗುತ್ತಿದೆ. ಕುಶಾಲನಗರ ಸಮೀಪದ ಫಿಶ್ ಕರಿ ರೈಸ್ ಹೋಟೆಲ್ನ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಟ್ಟ ಕಾರಣ ಗ್ರಾಮಪಂಚಾಯತ್ ಹೋಟೆಲ್ನ ಪರವಾನಗಿಯನ್ನು ರದ್ದು ಮಾಡಿ ಬೀಗ ಜಡೆದಿದೆ.
ಲಕ್ಷಾಂತರ ಜೀವಗಳಿಗೆ ಕುಡಿಯಲು ನೀರು ಕೊಡುವ ಕಾವೇರಿಗೆ ತವರಿನಲ್ಲಿ ತ್ಯಾಜ್ಯ ಹಾಗೂ ಚರಂಡಿ ನೀರು ನಿರಂತರವಾಗಿ ಹರಿಯುವುದರಿಂದ ಜಲ ಮಲಿನಾವಾಗುತ್ತಿದೆ. ಪಿಶ್ ಕರಿ ರೈಸ್ ಹೋಟೆಲ್ ಕೊಳಚೆ ನೀರು ಹರಿಯುವುದನ್ನು ತಡೆಯುವವರೆಗೂ ಪರವಾನಗಿ ರದ್ದು ಮಾಡಲಾಗಿದೆ. ಕಾವೇರಿ ಹರಿಯುವ ಪಕ್ಕದಲ್ಲಿ ಈ ಹೋಟೆಲ್ ಇದ್ದು, ಅದರ ಎಲ್ಲಾ ರೀತಿಯ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಟ್ಟಿದ್ದಾರೆ ಎಂಬ ಆರೋಪವಿದೆ. ಸ್ಥಳೀಯರು ಎಷ್ಟು ಹೇಳಿದರೂ ಕೇಳದ ಕಾರಣ ಪಂಚಾಯತ್ನಿಂದ ಬೀಗ ಹಾಕಲಾಗಿದೆ. ಉಳಿದಂತೆ ಎಲ್ಲಾ ಹೊಟೇಲ್ ರೆಸಾರ್ಟ್ ಮಾಲೀಕರಿಗೆ ಎಚ್ಚರಿಸಲಾಗಿದೆ ಎಂದು ಕಾವೇರಿ ಉಳಿಸಿ ಹೋರಾಟಗಾರ ಚಂದ್ರ ಮೋಹನ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಜೀವನದಿಯಾಗಿರುವ ಕಾವೇರಿಯನ್ನು ಜನರು ಭಕ್ತಿಯಿಂದ ಕಾಣುತ್ತಾರೆ. ಆದರೆ, ಕೆಲವರ ನಿರ್ಲಕ್ಷ್ಯದಿಂದ ತ್ಯಾಜ್ಯ, ಚರಂಡಿ ನೀರು ಸೇರಿ ಬಳಸಲು ಸಾಧ್ಯವಾಗದೆ ವಾಸನೆ ಬರುತ್ತಿದೆ. ನೀರನ್ನು ಅನಿವಾರ್ಯವಾಗಿ ಬಳಸುತ್ತಿರುವ ಜನರು, ಪ್ರಾಣಿ ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಪ್ರಯೋಗಾಲಯದಿಂದ ಬಂದ ಹಲವು ವರದಿಗಳು ಕೂಡ ಆತಂಕಕಾರಿ ಅಂಶಗಳನ್ನು ಈ ಹಿಂದೆಯೇ ಹೊರಗೆಡವಿವೆ. ಆದರೂ, ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಅಗತ್ಯ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಕಾವೇರಿ ಮತ್ತಷ್ಟು ಮಲಿನವಾಗುತ್ತಲೇ ಇದೆ ಎಂದು ಸ್ಥಳೀಯ ವಿ.ಪಿ. ಶಶಿಧರ್ ತಿಳಿಸಿದರು.
ಮೂಲ ಕಾವೇರಿಯಿಂದ ಜಿಲ್ಲೆಯ 24 ಪಂಚಾಯತ್ಗಳ ವ್ಯಾಪ್ತಿಯ ಕಲುಷಿತ ನೀರು ನೇರವಾಗಿ ನದಿಗೆ ಸೇರುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಪಟ್ಟಣದ ಬಹುತೇಕ ತ್ಯಾಜ್ಯ ನದಿ ಸೇರುತ್ತಿರುವುದರಿಂದ ಜಲಚರಗಳು ನಾಶ ಹೊಂದುವುದರೊಂದಿಗೆ ನದಿ ನೀರಿನ ಗುಣಮಟ್ಟ ಬಳಕೆಗೆ ಯೋಗ್ಯವಲ್ಲ ಎನ್ನುವ ಸ್ಥಿತಿಗೆ ತಲುಪಿರುವುದು ನಿಜಕ್ಕೂ ಆತಂಕಕಾರಿ. ಪಟ್ಟಣದ ಮೇಲ್ಭಾಗದಿಂದ ಚರಂಡಿ ಮೂಲಕ ಹರಿದು ಬರುವ ಕಲುಷಿತ ನೀರು, ಸರ್ಕಾರಿ ಸಾರಿಗೆ ಬಸ್ ನಿಲ್ದಾಣ ಭಾಗದಿಂದ ನದಿಯ ಕಡೆಗೆ ಹರಿಯುತ್ತಿದೆ. ಕಾವೇರಿ ನದಿ ತವರು ಜಿಲ್ಲೆ ಕೊಡಗಿನಲ್ಲೇ ಕಲುಷಿತಗೊಳ್ಳುವುದಕ್ಕೆ ಕಾರಣವಾಗುತ್ತಿದೆ. ಕಾಫಿ ಪಲ್ಪಿಂಗ್ ಮತ್ತು ಶುಂಠಿ ತೊಳೆದ ಕೆಮಿಕಲ್ ನೀರು ಸೇರುವುದರಿಂದ ಸಾವಿರಾರು ಜಲಚರಗಳಿಗೆ ಕುತ್ತುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ನದಿ ತಟದ ಸರ್ವೇ ಕಾರ್ಯ ನಡೆಸಿ ನದಿ ಗಡಿ ಗುರುತು ಮಾಡುವುದು, ನದಿ ತಟದಲ್ಲಿರುವ ಅಕ್ರಮ ಕಟ್ಟಡಗಳ ತೆರವುಗೊಳಿಸುವುದು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವುದು, ಗ್ರಾಮ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಲುಷಿತ ತ್ಯಾಜ್ಯಗಳನ್ನು ನದಿಗೆ ನೇರವಾಗಿ ಹರಿಯದಂತೆ ವೈಜ್ಞಾನಿಕ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಬೇಕು. ಇದರಿಂದ ಕಾವೇರಿ ಕಲುಷಿತವಾಗುವುದನ್ನು ತಡೆಯಬಹುದು ಎಂದು ಸ್ಥಳೀಯರು ಸಲಹೆಗಳನ್ನು ನೀಡಿದ್ದಾರೆ.