ಕೊಡಗು: ಕೇರಳ ಮತ್ತು ಕೊಡಗು ಎರಡೂ ಕಡೆಯಲ್ಲೂ ಏಕಕಾಲದಲ್ಲಿ ನಾನು ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ. ಅದು ಸಾಧ್ಯವೇ? ಹೀಗಿರುವಾಗ ನಾನು ಎರಡೂ ಕಡೆಯಲ್ಲೂ ನ್ಯಾಯಾಲಯಕ್ಕೆ ಹೇಗೆ ಹಾಜರಾಗಲಿ ಎಂದು ನಕ್ಸಲ್ ನಾಯಕ ರೂಪೇಶ್ ವಾದಿಸಿದ್ದಾರೆ.
ಕೊಡಗು ಮತ್ತು ಕೇರಳ ಎರಡೂ ಕಡೆಯಲ್ಲೂ ಒಂದೇ ಸಮಯದಲ್ಲಿ ಇರುವುದಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎರಡೂ ಕಡೆಗಳಲ್ಲಿ ಒಂದೇ ಸಮಯದಲ್ಲಿ ನಾನು ಇರಲು ಹೇಗೆ ಸಾಧ್ಯ ಎಂದು ಹೇಳುವ ಮೂಲಕ ನಕ್ಸಲ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿದ್ದಾನೆ. ಹಾಗೆಯೇ ಈ ಪ್ರಕರಣದಿಂದ ತನ್ನನ್ನು ಕೈ ಬಿಡುವಂತೆ ವಾದಿಸಿದ್ದಾನೆ. ಜೊತೆಗೆ ಪ್ರಕರಣದ ನ್ಯೂನ್ಯತೆ ಎತ್ತಿ ಹಿಡಿಯಲು ಆತ ಪ್ರಯತ್ನಿಸಿದ್ದಾನೆ.
2010ರಲ್ಲಿ ಕೊಡಗಿನ ಮುಂಡ್ರೋಟು ಅರಣ್ಯದಲ್ಲಿ ಕಾಣಿಸಿಕೊಂಡಿದ್ದ ಆರೋಪ ಹಿನ್ನೆಲೆಯಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತಂದ ವೇಳೆ ಕಾಲಾವಕಾಶ ಕೇಳಿ ನ್ಯಾಯಾಲಯದ ಆವರಣದಲ್ಲೇ ಪ್ರಕರಣ ಅಧ್ಯಯನ ಮಾಡಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಸಮಯ ವಾದ ಮಂಡಿಸಿದ್ದಾನೆ.
7 ನೇ ಬಾರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾದ ರೂಪೇಶ್ ವಾದ ಆಲಿಸಿದ ನ್ಯಾಯಾಧೀಶ ವೀರಪ್ಪ ವಿ. ಮಲ್ಲಾಪುರ್, ಜುಲೈ 23ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದ್ದಾರೆ. ವಿಚಾರಣೆ ನಂತರ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಯನ್ನು ಕೇರಳದತ್ತ ಕರೆದೊಯ್ಯಲಾಗಿದೆ.