ಕೊಡಗು: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಮತ್ತೆ ವಿಘ್ನ ಎದುರಾಗಿದೆ. ಸ್ಥಳೀಯರ ವಿರೋಧ ನಡುವೆ ಕೆಲಸ ಮಾಡಲು ಬಂದ ಜೆಸಿಬಿಗಳನ್ನು ತಡೆದ ಪರಿಣಾಮ ಪೊಲೀಸ್ ಮತ್ತು ಸ್ಥಳೀಯರ ನಡುವೆ ಗಲಾಟೆಯಾಗಿದೆ. ಸ್ಟೇಡಿಯಂ ನಿರ್ಮಾಣಕ್ಕೆ ಈಗಾಲೇ 12 ಏಕರೆ 70 ಸೆಂಟ್ ಪ್ರದೇಶ ಗುರುತು ಮಾಡಿ ಕೆಲಸಕ್ಕೆ ಅಡಿಪಾಯ ಹಾಕಲಾಗಿದೆ. ಆದರೆ, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ನಮ್ಮ ಪೂರ್ವಜರ ಸಮಾಧಿಗಳು ಇಲ್ಲಿವೆ. ಈ ಜಾಗ ಬಿಟ್ಟು ಬೇರೆ ಜಾಗದಲ್ಲಿ ಸ್ಟೇಡಿಯಂ ಕಟ್ಟಿಕೊಳ್ಳಿ ಎಂದು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಹೋರಾಟದ ನಡುವೆ ಕೆಲಸ ಶುರು ಮಾಡಿದೆ. ಅಲ್ಲದೇ ಪ್ರತಿಭಟಿಸಿದ ಜನರನ್ನು ಬಂಧಿಸಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಸ್ಟೇಡಿಯಂ ನಿರ್ಮಾಣಕ್ಕೆ ವಿರೋಧ ಯಾಕೆ?: ಕೊಡಗು ಜಿಲ್ಲೆ ಮೂರ್ನಾಡು ಸಮೀಪದ ಹೊದ್ದೂರು ಪಂಚಾಯತ್ ವ್ಯಾಪ್ತಿಯ ಪಾಲೇಮಾಡಿನಲ್ಲಿ ಸರ್ಕಾರ ಈಗಾಲೇ ಇವರಿಗೆ ಒಂದು ಎಕರೆ ಸ್ಮಶಾನ ಜಾಗ ಮಂಜೂರು ಮಾಡಿದೆ. ಆದರೆ, ಪಾಲೆಮಾಡು ನಿವಾಸಿಗಳು ಮಾತ್ರ ಇದಕ್ಕೆ ಸುತಾರಾಮ್ ಒಪ್ಪುತ್ತಿಲ್ಲ. ನಾವು ಹಲವಾರು ವರ್ಷಗಳಿಂದ ಈ ಜಾಗದಲ್ಲಿ ತಮ್ಮ ಪೂರ್ವಿಕರ ಸುಮಾರು 150 ಮಂದಿಯ ಶವ ಸಂಸ್ಕಾರ ಮಾಡಿದ್ದೇವೆ. ಹಾಗಾಗಿ ಈ ಪ್ರದೇಶದಲ್ಲಿ ನಾವು ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಸ್ಟೇಡಿಯಂ ಸ್ಟೇಡಿಯಂ ಆದರೆ, ಜಿಲ್ಲೆ ಕೂಡ ಅಭಿವೃದ್ಧಿ ಆಗುತ್ತದೆ. ಆದರೆ, ನಮ್ಮ ಪೂರ್ವಜರ ಸಮಾಧಿ ಮೇಲೆ ಸ್ಟೇಡಿಯಂ ಮಾಡುವುದು ಬೇಡ. ಬೇರೆ ಜಾಗದಲ್ಲಿ ಮಾಡಲು ನಮ್ಮ ಅಭ್ಯಂತರವಿಲ್ಲ. ಈ ಜಾಗದ 2 ಎಕರೆ ಸ್ಮಶಾನ ಜಾಗ ಬಿಟ್ಟು ಬೇರೆ ಕಡೆ ಮಾಡಿ ಎಂದು ಪಟ್ಟು ಹಿಡಿದ್ದಿದ್ದಾರೆ.
ಇಲ್ಲಿನ ಕೆಲವು ಗ್ರಾಮಸ್ಥರು ಸ್ಟೇಡಿಯಂ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದಾರೆ. ನಮ್ಮ ಊರಿನಲ್ಲಿ ಸ್ಟೇಡಿಯಂ ಆಗೋದು ನಮಗೊಂದು ಸುವರ್ಣ ಅವಕಾಶ. ಇದರಿಂದ ನಮ್ಮ ಗ್ರಾಮ, ಜಿಲ್ಲೆ ಕೂಡ ಅಭಿವೃದ್ಧಿ ಹೊಂದುತ್ತದೆ. ಅಲ್ಲದೇ. ಸ್ಥಳೀಯ ನಿವಾಸಿಗಳಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಕೊಡಗು ಹೇಳಿ ಕೇಳಿ ಕ್ರೀಡಾ ಜಿಲ್ಲೆಯ ತವರೂರು. ಯಾವುದೇ ಸೌಕರ್ಯಗಳಿಲ್ಲದೇ, ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಸ್ಟೇಡಿಯಂ ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಮತ್ತಷ್ಟು ತೊಡಗಿಸಿಕೊಳ್ಳಲು ಸಾಧ್ಯಾವಾಗುತ್ತದೆ. ಆದರೆ, ಸ್ಮಶಾನದ ಹೆಸರಿನಲ್ಲಿ ಇಲ್ಲಿನ ಕೆಲ ನಿವಾಸಿಗಳು ತೊಂದರೆ ಮಾಡುತ್ತಿರುವುದು ಸರಿಯಲ್ಲ. ಅವರು ಏನೇ ಅಡಚಣೆ ಮಾಡಿದರೂ ಸರ್ಕಾರದ ನಿಯಾಮಾನುಸಾರ ನಾವು ನಮ್ಮ ಕಾಮಗಾರಿ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಜಿಲ್ಲಾ ಸಂಯೋಜಕ ಪೃಥ್ವಿ ದೇವಯ್ಯ ಹೇಳಿದ್ದಾರೆ.