ಕೊಡಗು: ಹಚ್ಚ ಹಸಿರಿನಿಂದ ಕಂಗೊಳಿಸುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುವ ಕೊಡಗಿನಲ್ಲಿ ಪ್ರವಾಸಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಜಿಲ್ಲೆಯ ಕುಶಾಲನಗರದ ನಿಸರ್ಗ ಧಾಮದ ಬಳಿ ಯುವತಿಗೆ ಚಾಕು ಇರಿದ ಪ್ರಕರಣ ವಾರದ ಹಿಂದಷ್ಟೇ ನಡೆದಿತ್ತು. ಇದೀಗ ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತದ ಬಳಿ ಸಣ್ಣ ವಿಷಯಕ್ಕೆ ಮಹಿಳಾ ಪ್ರವಾಸಿಗರೊಬ್ಬರ ಮೇಲೆ ಯುವಕ ಹಲ್ಲೆ ನಡೆಸಿದ್ದಾನೆ.
ಈ ಪ್ರಕರಣದ ಬಳಿಕ ಕಾವೇರಿ ನಿಸರ್ಗಧಾಮದಲ್ಲಿ ಕಾರು ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ, ಪ್ರವಾಸಿಗನ ಮೇಲೆ ಸ್ಥಳೀಯ ನಾಲ್ಕೈದು ಕಾರು ಚಾಲಕರು ಹಲ್ಲೆ ಮಾಡಿದ್ದಾರೆ. ಈ ಘಟನೆ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲವು ಕಿಡಿಗೇಡಿಗಳು ಪ್ರವಾಸಿಗರಿಗೆ ತೊಂದರೆ ಕೊಡುತ್ತಿದ್ದಾರೆ. ಹಾಗಾಗಿ ಪ್ರವಾಸಿತಾಣಗಳಲ್ಲಿ ಪೊಲೀಸ್ ಭದ್ರತೆ ಒದಗಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಸರಿಯಾದ ಪೊಲೀಸ್ ಭದ್ರತೆ ಇಲ್ಲದಿರುವುದೇ ಈ ಎಲ್ಲಾ ಘಟನೆಗಳಿಗೆ ಕಾರಣ ಎನ್ನಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಕೆಲವೊಮ್ಮೆ ಅತಿರೇಕದಿಂದ ವರ್ತಿಸಿದರೆ, ಮತ್ತೆ ಕೆಲವು ಬಾರಿ ಸ್ಥಳೀಯರು ದುರಹಂಕಾರದಿಂದ ನಡೆದುಕೊಳ್ಳುತ್ತಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯವನ್ನು ಕಲ್ಪಿಸದಿರುವುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನಲ್ಲಿ 800 ವರ್ಷದ ಪುರಾತನ ಶಿವ ದೇವಾಲಯ ಪತ್ತೆ.. ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ನಿರ್ಧಾರ