ಮಡಿಕೇರಿ(ಕೊಡಗು): ಕೊಡಗಿನೆಲ್ಲೆಡೆ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊಡಗಿನವರ ವಿಶಿಷ್ಟ ಹಬ್ಬ ಹುತ್ತರಿಯನ್ನು ಪ್ರತಿ ಮನೆಯಲ್ಲೂ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ವರ್ಷಪೂರ್ತಿ ಅನ್ನ ನೀಡುವ ಧಾನ್ಯಲಕ್ಷ್ಮಿ ಪೂಜಿಸಿ ಮನೆಗೊಯ್ಯೋ ಸಾಂಪ್ರದಾಯಿಕ ಆಚರಣೆ ಈ ಹುತ್ತರಿ. ಕೊಡಗು ಎಂದರೆ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಸರಾದ ಜಿಲ್ಲೆ, ಪ್ರಕೃತಿಯೊಂದಿಗೆ ಬೆಸೆದುಕೊಂಡ ಕೊಡಗಿನವರ ಪ್ರತಿಯೊಂದು ಹಬ್ಬ ಹರಿದಿನಗಳು ಗಮನ ಸೆಳೆಯುತ್ತವೆ.
ಇಂದು ಕೊಡಗಿನಾದ್ಯಂತ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೊಡಗಿನವರ ಪ್ರಮುಖ ಹಬ್ಬ ಹುತ್ತರಿ ಜಾನಪದೀಯ ವಿಶಿಷ್ಟ ಹಬ್ಬ ನಿಜಕ್ಕೂ ವೈಶಿಷ್ಟ್ಯಪೂರ್ಣ. ಈ ಹಿನ್ನೆಲೆಯಲ್ಲಿ ಇಂದು ಮಂಜಿನ ನಗರಿ ಮಡಿಕೇರಿಯ ಕೊಡವ ಸಮಾಜ ಹಾಗೂ ಓಂಕಾರೇಶ್ವರ ದೇವಾಲಯದ ಸಮಿತಿಯಿಂದ ನಡೆದ ಹುತ್ತರಿ ಹಬ್ಬ ಗಮನ ಸೆಳೆಯಿತು.
ಸಾಂಪ್ರದಾಯಿಕ ಉಡುಗೆ ತೊಟ್ಟ ಕೊಡಗಿನವರು ದೇವಾಲಯದ ಆವರಣದಲ್ಲಿ ಇರುವ ಭತ್ತದ ತೆನೆಗೆ ನಮಿಸಿ ನೆರೆ ಕಟ್ಟುತ್ತಾರೆ. ನಂತರ ದುಡಿಕಟ್ಟು ಪಾಟ್ ಸಮೇತ ಕೋವಿಯೊಂದಿಗೆ ಊರಿನ ಮಂದಿಯೆಲ್ಲ ಮೆರವಣಿಗೆ ಮೂಲಕ ಗದ್ದೆಗೆ ತೆರಳುತ್ತಾರೆ. ಅಲ್ಲಿ ಸಂಭ್ರಮದಿಂದ ಒಂದು ಸುತ್ತು ಗುಂಡು ಹಾರಿಸಿ ಕದಿರು ಕೊಯ್ಯುತ್ತಾರೆ. ಪುಲಿ ಪುಲಿ ದೇವಾ ಪೊಲಿಯೇ ದೇವಾ ಎಂದು ಸಂತಸದಿಂದ ಕೂಗುತ್ತಾ ಮನೆಮಂದಿಯೆಲ್ಲ ಧಾನ್ಯ ಶಾಸ್ತ್ರೋಕ್ತವಾಗಿ ತೆಗೆದು ಸಾಂಪ್ರದಾಯಿಕ ಹಾಡಿನೊಂದಿಗೆ ಮನೆಗೊಯ್ದು ಪೂಜಿಸುವುದು ಹುತ್ತರಿ ಹಬ್ಬದ ವಿಶೇಷವಾಗಿದೆ.
ಕೊಡಗಿನಾದ್ಯಂತ ಇಂದು ರಾತ್ರಿಯಿಂದ, ಕೊಡವರ ಕುಲದೈವ ಇಗ್ಗುತಪ್ಪನ ಸನ್ನಿಧಿಯಲ್ಲಿ ನೆರೆಕಟ್ಟುವ ಮೂಲಕ ಹುತ್ತರಿ ಹಬ್ಬಕ್ಕೆ ಅಧಿಕೃತವಾಗಿ ಚಾಲನೆ ಸಿಗುತ್ತದೆ. ಅಂದರೆ ಪ್ರಕೃತಿಯೊಂದಿಗೆ ಹೊಂದಿಕೊಂಡ ಕೊಡಗಿನ ಜನರ ಆಚಾರದ ಸಂಕೇತವಾಗಿ ಐದು ಬಗೆಯ ಹಸಿರು ಮರದ ಎಲೆಗಳು, ಉಂಬಳಿ, ಹಲಸು, ಗೇರು, ಮಾವು ಸೇರಿದಂತೆ ಐದು ಬಗೆಯ ಹಸಿರೆಲೆಗಳನ್ನು ಒಟ್ಟಗೂಡಿಸಿ ನೆರೆಕಟ್ಟಿ ಗುರುವಿಗೆ - ದೈವಕ್ಕೆ ನಮಿಸಲಾಗುತ್ತದೆ. ನಂತರ 8 ಗಂಟೆಗೆ ಕದಿರು ತೆಗೆಯಲಾಗುತ್ತೆ.
ಸಂಭ್ರಮ ಸಡಗರದಿಂದ ಎಲ್ಲರೂ ಒಂದೆಡೆ ಕಲೆತು ವರ್ಷಪೂರ್ತಿ ಮನೆ ಮಂದಿಗೆಲ್ಲ ಅನ್ನ ನೀಡುವ ಧಾನ್ಯಲಕ್ಷ್ಮಿ ಪೂಜ್ಯಭಾವನೆಯಿಂದ ಮನೆಗೆ ಬರಮಾಡಿಕೊಳ್ಳಲಾಗುತ್ತದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದ ಸಂಭ್ರಮದಲ್ಲಿರೋ ಜನರು ಗದ್ದುಗೆಯಿಂದ ತಂದ ಭತ್ತದ ಪೈರನ್ನು ಕಣದಲ್ಲಿರಿಸಿ ತಮ್ಮ ಜಾನಪದ ನೃತ್ಯಗಳ ಮೂಲಕ ನಲಿಯುತ್ತಾರೆ. ಕಡೆಗೆ ಎಲ್ಲರೂ ಸಾಮೂಹಿಕವಾಗಿ ಕೈಯಲ್ಲಿ ಕತ್ತಿ ಹಿಡಿದು ನೃತ್ಯ ಮಾಡುತ್ತಾರೆ. ಪುದಿಯ ಎಂದರೆ ಹೊಸ ಅರಿ(ಭತ್ತ) ವನ್ನು ಮನೆಗೊಯ್ಯೋ ಹಬ್ಬ ಹುತ್ತರಿ.
ಸಾವಿರಾರು ವರ್ಷಗಳಿಂದ ಜಾನಪದ ಹಬ್ಬ ಹುತ್ತರಿಯನ್ನು ಆಚರಿಸಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇದರ ಸಂಭ್ರಮ ಕಡಿಮೆಯಾಗಿದೆ. ಮೊದಲೆಲ್ಲಾ ಒಂದು ವಾರ ಮುಂಚಿತವಾಗಿಯೇ ಎಲ್ಲರೂ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಿದ್ದರು. ನಾನಾ ಕಾರಣಗಳಿಗಾಗಿ ಪ್ರಪಂಚದ ಬೇರೆ ಬೇರೆ ಕಡೆ ನೆಲೆಸಿರುವ ಎಲ್ಲರೂ ಈ ಹಬ್ಬಕ್ಕೆ ಬಂದೇ ಬರುತ್ತಾರೆ. ನೆಂಟರಿಷ್ಟರೆಲ್ಲ ಒಂದೆಡೆ ಕಲೆತು, ಸಂಭ್ರಮಿಸುತ್ತಾರೆ. ಹುತ್ತರಿಯ ಪ್ರಯುಕ್ತ ತಂಬಿಟ್ಟು, ವಿಶಿಷ್ಟ ಹುತ್ತರಿ ಗೆಣಸು, ಕಡಂಬಿಟ್ಟು ಘಮಘಮಿಸುತ್ತವೆ. ಹುತ್ತರಿಗೆ ವಿಶೇಷವಾಗಿ ಇಂದು ಕದಿರು ತೆಗೆದ ಭತ್ತದಿಂದ ತಯಾರಿಸಿದ ಪಾಯಸ ಪ್ರಮುಖವಾಗಿದ್ದು, ಎಲ್ಲೆಲ್ಲೂ ಹುತ್ತರಿ ಪಾಯಸದ ಸುವಾಸನೆ ಪಸರಿಸಲಿದೆ. ಹುತ್ತರಿ ಸಂಭ್ರಮ ಕೇವಲ ಇಂದಿಗೆ ಮಾತ್ರ ಸೀಮಿತವಾಗದೇ ನಾಳೆಯಿಂದ ಕೊಡಗಿನ ಜಾನಪದ ನೃತ್ಯಲೋಕದ ಅನಾವರಣದ ಜೊತೆಗೆ ಇಡೀ ನಾಡಲ್ಲಿ ಹುತ್ತರಿ ಸಂಭ್ರಮ ಆಚರಣೆ ಮಾಡುತ್ತಾರೆ.
ಇದನ್ನೂ ಓದಿ: ಸಗಣಿಯಲ್ಲಿ ಹೊಡೆದಾಡಿಕೊಂಡ ಜನರು.. ಇದು ಗಡಿನಾಡ ಕನ್ನಡಿಗರ ವಿಶೇಷ 'ಗೊರೆ ಹಬ್ಬ'