ಕೊಡಗು: ಜಿಲ್ಲೆಯಲ್ಲಿ ಎಲ್ಲೆಡೆ ಸುಗ್ಗಿಯ ಸಂಭ್ರಮ ಮನೆ ಮಾಡಿದೆ. ಹೊಲ-ಗದ್ದೆಗಳೆಲ್ಲಾ ಪೈರು, ತೆನೆಗಳಿಂದ ತುಂಬಿದ್ದು, ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಸಡಗರ ಎಲ್ಲೆಡೆಯಿದೆ. ಸುಗ್ಗಿ ಹಬ್ಬವಾಗಿರುವ ಹುತ್ತರಿಯನ್ನು ಕೊಡಗಿನಲ್ಲಿ ಸಂಭ್ರಮ ಮತ್ತು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ.
ಕೊಡಗು ವಿಶೇಷ ಸಂಸ್ಕೃತಿ, ಆಚರಣೆಗಳಿಗೆ ಪ್ರಸಿದ್ಧವಾಗಿದೆ. ಧಾನ್ಯ ದೇವತೆಯನ್ನು ಮನೆ ತುಂಬಿಕೊಳ್ಳುವ ಹಬ್ಬವೇ ಹುತ್ತರಿ. ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಒಕ್ಕಣೆ ಮಾಡಿ ಮನೆಗೆ ತರುವುದಕ್ಕೂ ಮುನ್ನ ಸಂಪ್ರದಾಯಬದ್ಧವಾಗಿ ಧಾನ್ಯ ಲಕ್ಷ್ಮಿಗೆ ಪೂಜೆ ಸಲ್ಲಿಸಿ, ಮನೆ ತುಂಬಿಕೊಂಡು ಹುತ್ತರಿ ಆಚರಿಸಿದ್ದಾರೆ.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಕಬೆಟಗೇರಿಯ ನಾಚಪ್ಪ ಅಧ್ಯಕ್ಷತೆಯ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ಸುಗ್ಗಿ ಹಬ್ಬ ಆಚರಿಸಲಾಯಿತು. ಐದು ಬಗೆಯ ಪತ್ರೆಗಳನ್ನಿಟ್ಟು ಕೊಡಗಿನ ಕುಲದೇವರಾದ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನೆರೆ ಕಟ್ಟಿದರು.
ಬಳಿಕ ಹೊಲ-ಗದ್ದೆಗಳಿಗೆ ಮಂಗಳ ವಾದ್ಯಗಳಾದ ದುಡಿಕೊಟ್ಟುಪಾಟ್ ಮೂಲಕ ತೆರಳಿ ಧಾನ್ಯ ಲಕ್ಷ್ಮಿಗೆ ಪೂಜೆ ಸಲ್ಲಿಸಿ, ವೀರತ್ವದ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಧಾನ್ಯ ಲಕ್ಷ್ಮಿಗೆ ಗೌರವ ಸಲ್ಲಿಸಿದರು. ಬಳಿಕ ಕದಿರು ಕೊಯ್ದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಒಕ್ಕಣೆ ಕಣಕ್ಕೆ ಕದಿರು ತರಲಾಯಿತು.
ಹೀಗೆ ತಂದ ಕದಿರನ್ನು ಕಣದಲ್ಲಿಟ್ಟು ಪೂಜೆ ಸಲ್ಲಿಸಿ ಕೊಡವರ ಸಾಂಪ್ರದಾಯಿಕ ನೃತ್ಯಗಳಾದ ದುಡಿಕೊಟ್ಟು ಪಾಟ್, ಕೋಲಾಟ ಮತ್ತು ಪರಿಯಕಳಿ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ನಂತರ ಕದಿರನ್ನು ಮನೆಗೆ ಕೊಂಡೊಯ್ದು ಸ್ವಾಮಿ ಇಗ್ಗುತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಕೊಂಡರು.
ಕೊಡವರಿಗೆ ಅಷ್ಟೇ ಅಲ್ಲದೆ ಕೊಡಗಿನ ಎಲ್ಲಾ ಸಮುದಾಯಗಳು ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲು ಇರುವ ವಿಶೇಷ ಹಬ್ಬ ಹುತ್ತರಿ. ಅದರಲ್ಲೂ ಕೊಡವರು ಮತ್ತು ಅರೆಗೌಡ ಸಮುದಾಯಗಳಿಗಂತೂ ತುಂಬಾ ವಿಶೇಷ.
ಈ ವಿಶೇಷ ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸಿ, ಬೆಳೆಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಎಲ್ಲೆಡೆ ಹುತ್ತರಿಯ ಸಂಭ್ರಮ ಸಡಗರ ಕಳೆಗಟ್ಟಿದ್ದು, ಕೊಡವರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ಹಬ್ಬ ಆಚರಿಸಿದರು.