ಸೋಮವಾರಪೇಟೆ(ಕೊಡಗು) : ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಮಳೆಗಾಲ ಪ್ರಾರಂಭಕ್ಕೂ ಮೊದಲು ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ತಾಲೂಕಿನ ಜಂಬೂರಿನಲ್ಲಿ ಸಂತ್ರಸ್ತರಿಗೆ ನಿರ್ಮಿಸಲಾಗುತ್ತಿರುವ ಮನೆಗಳನ್ನು ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಕಳೆದ 6 ತಿಂಗಳಿಂದ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಸಂತ್ರಸ್ತ ಫಲಾನುಭವಿಯೇ ಅಲ್ಲದ ಯಾರೋ ಒಬ್ಬ ಇಲ್ಲಿ ನಿರ್ಮಿಸುತ್ತಿರುವ ಮನೆಗಳ ಗುಣಮಟ್ಟ ಸರಿ ಇಲ್ಲ ಎಂದು ಆರೋಪಿಸುವುದು ಸರಿ ಅಲ್ಲ. ಇದು ಸಾಮಾನ್ಯ ಜನರ ತೆರಿಗೆ ಹಣ. ಅವರ ಅನುಕೂಲಕ್ಕಾಗಿಯೇ ಸ್ಥಳೀಯ ಜನಪ್ರತಿನಿಧಿಗಳು ವಿಶೇಷವಾಗಿ ಗಮನವಹಿಸಿ ಗುಣಮಟ್ಟದ ಕೆಲಸ ಮಾಡಿದ್ದಾರೆ. ಯಾರೂ ಒಂದು ರೂಪಾಯಿ ಕೊಡಬೇಕಾದ ಅವಶ್ಯಕತೆ ಇಲ್ಲ. ಈಗಾಗಲೇ ಒಳ ಚರಂಡಿ, ರಸ್ತೆ, ಬೀದಿ ದೀಪ ಎಲ್ಲ ಕೆಲಸಗಳು ಮುಕ್ತಾಯವಾಗಿವೆ. ಚಿಕ್ಕ,-ಪುಟ್ಟ ಕೆಲಸಗಳಿದ್ದರೆ, ಶೀಘ್ರದಲ್ಲೇ ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ನಾನೊಬ್ಬ ಪ್ರಾಕ್ಟಿಕಲ್ ಮ್ಯಾನ್:
ನಾನು ವಿಡಿಯೋ ಅದು ಇದು ನೋಡಲ್ಲ. ನಾನೊಬ್ಬ ಪ್ರಾಕ್ಟಿಕಲ್ ಮ್ಯಾನ್. ಬಡವರದ್ದು ಒಂದು ಸಣ್ಣ ಅಪಚಾರ ಆದ್ರೂ ಸಹಿಸಲ್ಲ. 13 ಲಕ್ಷ ಮನೆಗಳಲ್ಲಿ 6 ಲಕ್ಷ ಕಳಪೆ ಮನೆಗಳನ್ನು ಕಿತ್ತು ಬಿಸಾಕಿದ್ದೇನೆ. ಹಲವರ ಜೊತೆ ನಿಷ್ಠೂರ ಕಟ್ಟಿಕೊಂಡಿದ್ದೇನೆ. ಸೀರಿಯಸ್ ಆಗಿ ಹೇಳ್ತಿನಿ ಕೇಳು ಬಡವರ ಕೆಲಸಕ್ಕೆ ಕಲ್ಲು ಹಾಕಬೇಡ.
ಮನೆ ತಳಪಾಯದಲ್ಲಿ ಮರದ ಬೇರು ಇದೆ ಎಂದು ಹೇಳಿದಿರೆಲ್ಲ ಎಲ್ಲಿ ತೋರಿಸು ಎಂದು ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ ಕುಶಾಲನಗರದ ನಿವಾಸಿ ಒಬ್ಬರನ್ನು ಸೋಮಣ್ಣ ತರಾಟೆಗೆ ತೆಗೆದುಕೊಂಡರು.