ಕೊಡಗು: ಪ್ರವಾಹ ಮತ್ತು ಭೂಕುಸಿತದಲ್ಲಿ ಮನೆ ಕಳೆದುಕೊಂಡಿದ್ದ ನೂರಾರು ಸಂತ್ರಸ್ಥರಿಗೆ ಎರಡು ವರ್ಷಗಳು ಕಳೆದರೂ ಇಂದಿಗೂ ಮನೆ ವಿತರಿಸಿಲ್ಲ. ಆದರೆ ಸಂತ್ರಸ್ತರಲ್ಲದವರಿಗೂ ಅಕ್ರಮವಾಗಿ ಮನೆ ವಿತರಿಸಿರುವ ಆರೋಪ ಕೇಳಿ ಬಂದಿದೆ.
ಅಕ್ರಮ ನಡೆಸಿದ ಆರೋಪದ ಮೇಲೆ ಕಂದಾಯ ಇಲಾಖೆ ಸಿಬ್ಬಂದಿಯೊಬ್ಬರು ಅಮಾನತುಗೊಂಡಿದ್ದಾರೆ. 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ರಣ ಭೀಕರ ಪ್ರವಾಹ ಮತ್ತು ಭೂಕುಸಿತವಾಗಿತ್ತು. ಈ ವೇಳೆ ಬರೋಬ್ಬರಿ 1,048 ಜನರು ಮನೆ ಕಳೆದುಕೊಂಡಿದ್ದರು. ಜಿಲ್ಲೆಯ ಮದೆನಾಡು, ಜಂಬೂರು, ಕರ್ಣಂಗೇರಿ, ಬಿಳಿಗೇರಿ ಸೇರಿದಂತೆ ವಿವಿಧೆಡೆ ಆ ಸಂತ್ರಸ್ಥರಿಗೆ ಮನೆ ನಿರ್ಮಿಸಲಾಗಿತ್ತು. ಅದರಲ್ಲಿ ಸೋಮವಾರಪೇಟೆ ತಾಲೂಕಿನ ಜಂಬೂರು ಒಂದರಲ್ಲೇ 500 ಮನೆಗಳನ್ನು ನಿರ್ಮಿಸಿ ಕಾಮಗಾರಿ ಪೂರ್ಣಗೊಂಡ 380 ಮನೆಗಳನ್ನು ಅರ್ಹ ಸಂತ್ರಸ್ತರಿಗೆ ಜಿಲ್ಲಾಧಿಕಾರಿ ವಿತರಣೆ ಮಾಡಿದ್ದರು. ಇನ್ನುಳಿದ ಮನೆಗಳ ಪೈಕಿ 62 ಮನೆಗಳನ್ನು ಅರ್ಹರಲ್ಲದವರಿಗೂ ಉಪವಿಭಾಗ ಅಧಿಕಾರಿ ಕಚೇರಿಯ ಎಸ್‍ಡಿಎ ಸಿಬ್ಬಂದಿ ವಿತರಣೆ ಮಾಡಿರುವ ಆರೋಪ ಕೇಳಿ ಬಂದಿದೆ.
ಹಕ್ಕು ಪತ್ರಗಳನ್ನು ನೀಡದೆ ಮನೆಗಳ ಕೀಯನ್ನು 62 ಜನರಿಗೆ ವಿತರಣೆ ಮಾಡಲಾಗಿದೆ ಎನ್ನಲಾಗಿದೆ. ಇದರ ಹಿಂದೆ ಉನ್ನತ ಅಧಿಕಾರಿಗಳ ಕೈವಾಡವಿದೆ. ಇಲ್ಲದಿದ್ದರೆ ಒಬ್ಬ ಎಸ್‍ಡಿಎ ಮನೆಗಳ ಕೀಲಿ ಕೈಯನ್ನು ಅಷ್ಟು ಸುಲಭವಾಗಿ ಅರ್ಹರಲ್ಲದವರಿಗೆ ಕೊಡಲು ಸಾಧ್ಯವಿಲ್ಲ. ಇದರ ಹಿಂದೆ ಇರುವ ಅಧಿಕಾರಿ ಯಾರು ಎನ್ನೋದು ಗೊತ್ತಾಗಬೇಕಿದೆ ಎನ್ನೋದು ಮಡಿಕೇರಿ ಶಾಸಕರ ಆಗ್ರಹವಾಗಿದೆ.
ಉಸ್ತುವಾರಿ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲೂ ಇದೇ ವಿಷಯ ತೀವ್ರ ಚರ್ಚೆಗೆ ಕಾರಣವಾಯಿತು. ಅಕ್ರಮವಾಗಿ ಮನೆಗಳ ವಿತರಣೆ ಮಾಡಿರುವು ಅಷ್ಟೇ ಅಲ್ಲ, ಜೊತೆಗೆ ಸರ್ಕಾರದ ಅನುದಾನ ಪಡೆದು ಸ್ವತಃ ಮನೆಗಳನ್ನು ನಿರ್ಮಿಸಿಕೊಳ್ಳುವುದಾಗಿ ನಿರ್ಧರಿಸಿದ್ದರು. ಆದರೆ ಸಂತ್ರಸ್ತರು ಮನೆಗಳನ್ನು ನಿರ್ಮಿಸದಿದ್ದರೂ ಅನುದಾನವನ್ನು ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆ ಎಂತಲೂ ಶಾಸಕ ಅಪ್ಪಚ್ಚು ರಂಜನ್ ಕೆಡಿಪಿ ಸಭೆಯಲ್ಲಿ ಆರೋಪಿಸಿದರು.
ಎಲ್ಲವನ್ನೂ ಪರಿಶೀಲಿಸಿದ ಸಚಿವ ಸೋಮಣ್ಣ, ಅರ್ಹರಿಗೆ ಮನೆಗಳು ಸಿಗಬೇಕಾಗಿತ್ತು. ಆದರೆ ಕಂದಾಯ ಇಲಾಖೆಯ ಹೇಮಂತ್ ಎನ್ನೋ ಸಿಬ್ಬಂದಿ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳನ್ನು ಅಕ್ರಮವಾಗಿ ಸಂತ್ರಸ್ತರಲ್ಲದವರಿಗೆ ವಿತರಿಸಿದ್ದಾರೆ ಎನ್ನೋದು ಗೊತ್ತಾಗಿದೆ. ಹೀಗಾಗಿ ತನಿಖೆಯಾಗಿ ಸತ್ಯ ಆಚೆಗೆ ಬರುವವರಗೆ ಆತನನ್ನು ತಕ್ಷಣದಿಂದಲೇ ಅಮಾನತು ಮಾಡಲು ಸೂಚಿಸಿ ಆದೇಶಿಸಿದ್ದಾರೆ.