ಮಡಿಕೇರಿ: ಕಳೆದ ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ನೆಲೆ ಕಳೆದುಕೊಂಡು ಸಂತ್ರಸ್ತರಾಗಿದ್ದ ಕುಟುಂಬಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದ್ದು, ಸದ್ಯದಲ್ಲೇ ಮನೆಗಳ ಹಸ್ತಾಂತರ ಆಗಲಿವೆ.
ಮಡಿಕೇರಿ ತಾಲೂಕಿನ ಕರ್ಣಂಗೇರಿ, ಮದೆ, ಗಾಳಿಬೀಡು, ಜಂಬೂರು, ಕೆ.ನಿಡುಗಣಿ ಗ್ರಾಮಗಳಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಲಾಗುತ್ತಿತ್ತು. ಅದರಲ್ಲಿ ಕಳೆದ ವರ್ಷ ಕರ್ಣಂಗೇರಿ ಗ್ರಾಮದಲ್ಲಿ ಮಾತ್ರ 35 ಮಂದಿಗೆ ಮಾತ್ರ ಜಿಲ್ಲಾಡಳಿತ ಮನೆಗಳನ್ನು ಹಸ್ತಾಂತರಿಸಿತ್ತು. ಉಳಿದವರು ಕಳೆದ ಎರಡು ವರ್ಷಗಳಿಂದಲೂ ಮನೆಗಳಿಗೆ ಚಾತಕ ಪಕ್ಷಿಯಂತೆ ಕಾದಿದ್ದಾರೆ.
ಮನೆ ಕಳೆದುಕೊಂಡಿದ್ದ ಸಂತ್ರಸ್ತರ ಪೈಕಿ ಇದೀಗ ಮದೆ ಹಾಗೂ ಜಂಬೂರಿನ 463 ಮಂದಿಗೆ ಸೂರು ದೊರೆಯಲಿದೆ. ಮುಂಗಾರು ಆರಂಭಕ್ಕೂ ಮೊದಲು ಈ ಸಂತ್ರಸ್ತರಿಗೆ ಮನೆ ಹಸ್ತಾಂತರ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಮೇ 29ರಂದು ಕೀ ಹಸ್ತಾಂತರಿಸುವ ನಿರೀಕ್ಷೆಗಳಿವೆ.
2020ರ ಮಾರ್ಚ್ ಅಂತ್ಯದೊಳಗೆ ಪುನರ್ವಸತಿ ಕಲ್ಪಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ ಇದುವರೆಗೂ ಮನೆಗಳು ದೊರಕಿಲ್ಲ. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದು, ಕೆಲಸವಿಲ್ಲದೆ, ಹಣವಿಲ್ಲದೆ ಪರದಾಡುವಂತಾಗಿದೆ. ಸರ್ಕಾರವು ಪ್ರತಿ ಮನೆಗೆ 9.85 ಲಕ್ಷ ವೆಚ್ಚ ಮಾಡಿದೆ. 2 ಕೋಣೆಯುಳ್ಳ ಮನೆ ನಿರ್ಮಿಸಲಾಗಿದ್ದು, ಅಗತ್ಯವುಳ್ಳವರು ಹೆಚ್ಚುವರಿ ಕೊಠಡಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಮನೆಗಳನ್ನು ನಿರ್ಮಿಸಲಾಗಿದೆ.
ಹೆಚ್.ಡಿ.ಕುಮಾರಸ್ವಾಮಿ ‘ಮೈತ್ರಿ’ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಂಬೂರು ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ‘ಮದೆಯಲ್ಲಿ 80 ಹಾಗೂ ಜಂಬೂರು ಗ್ರಾಮದಲ್ಲಿ 383 ಮನೆ ಹಸ್ತಾಂತರ ಮಾಡಲಾಗುವುದು. ಉಳಿದ ಮನೆಗಳು ನಿರ್ಮಾಣ ಹಂತದಲ್ಲಿವೆ. ಸರಳ ಕಾರ್ಯಕ್ರಮ ಮಾಡಿ ಮನೆ ಹಸ್ತಾಂತರಿಸಲು ಚಿಂತಿಸಲಾಗಿದೆ. ಮೇ 17ರ ತನಕ ಲಾಕ್‌ಡೌನ್ ನಿಯಮದಂತೆ ಯಾವುದೇ ವೇದಿಕೆ ಕಾರ್ಯಕ್ರಮ ನಡೆಸುವಂತಿಲ್ಲ. ಅದಾದ ಮೇಲೆ ಕೇಂದ್ರ ಸರ್ಕಾರವು ಹೊಸ ಮಾರ್ಗಸೂಚಿ ಪ್ರಕಟಿಸಲಿದೆ.
ಮನೆ ಹಸ್ತಾಂತರಕ್ಕೆ ಸಿದ್ಧತೆ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೇ 22ರಂದು ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. ಅದೇ ದಿನ ಮದೆ, ಜಂಬೂರು ಗ್ರಾಮಕ್ಕೆ ಭೇಟಿ ನೀಡಿ ಮನೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಮನೆ ಹಸ್ತಾಂತರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರುವ ನಿರೀಕ್ಷೆ ಇದೆ.