ಕೊಡಗು: ನಾಳೆಗೆ 2015ರ ಟಿಪ್ಪು ಜಯಂತಿ ವೇಳೆ ಜರುಗಿದ ಕರಾಳ ಘಟನೆಗೆ 6 ವರ್ಷ ತುಂಬಲಿದೆ. ಮಡಿಕೇರಿಯಲ್ಲಿ ಘಟನೆಯಲ್ಲಿ ಮೃತಪಟ್ಟಿದ್ದ ಕುಟ್ಟಪ್ಪ ಅವರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಿದೆ.
ನಾಳೆ ಮಡಿಕೇರಿಯಲ್ಲಿ ನಡೆಯಲಿರುವ ಹುತಾತ್ಮ ಕುಟ್ಟಪ್ಪ ಸ್ಮರಣೆ ಆಚರಣೆ ವೇಳೆ ಯಾವುದೇ ಘಟನೆಗಳು ನಡೆಯದಂತೆ ಜಿಲ್ಲೆಯಾದ್ಯಂತ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಅದಕ್ಕಾಗಿ ಮಡಿಕೇರಿಯ ಪ್ರಮುಖ ರಸ್ತೆಯಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು. RAF, DARF ತುಕಡಿಗಳು ರೂಟ್ ಮಾರ್ಚ್ ನಡೆಸಿದವು. ಮುನ್ನೂರಕ್ಕೂ ಹೆಚ್ಚು ಪೊಲೀಸರು ರೂಟ್ ಮಾರ್ಚ್ನಲ್ಲಿ ಭಾಗಿಯಾಗಿದ್ದರು.
2015ರಲ್ಲಿ ಏನಾಗಿತ್ತು?:
2015ರಲ್ಲಿ ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಗಲಭೆ ನಡೆದು ಪ್ರಾಣಹಾನಿ ಸಂಭವಿಸಿತ್ತು. ಹಿಂದೂ ಪರ ಸಂಘಟನೆಯ ವಿರೋಧದ ನಡುವೆ ಸರ್ಕಾರ ವತಿಯಿಂದ ನಡೆದ ಟಿಪ್ಪು ಆಚರಣೆ ವೇಳೆ ಹಿಂದೂಪರ ಸಂಘಟನೆಯ ಸದಸ್ಯ ಕುಟ್ಟಪ್ಪ, ಮತ್ತು ಮುಸ್ಲಿಂ ಸಂಘಟನೆಯ ಸದಸ್ಯ ಶಾಹುಲ್ ಹಮೀದ್ ಹತ್ಯೆಯಾಗಿತ್ತು.