ಕೊಡಗು: ಜಿಲ್ಲೆಯ ಬ್ರಹ್ಮಗಿರಿ ತಪ್ಪಲು, ತಲಕಾವೇರಿ, ಭಾಗಮಂಡಲ, ನಾಪೋಕ್ಲು ಸೇರಿದಂತೆ ವಿರಾಜಪೇಟೆ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ಹಲವು ದಿನಗಳಿಂದ ಬಿಡುವು ನೀಡಿದ್ದ ವರುಣ ಮತ್ತೆ ಸುರಿಯುತ್ತಿರುವುದರಿಂದ ಕಾಫಿ ಬೆಳೆಯ ಮೇಲೆಯೂ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿದೆ. ಮಳೆಗಾಲ ಮುಗಿದಿದ್ದರೂ ಸುರಿಯುತ್ತಿರುವ ಅಕಾಲಿಕ ಮಳೆಗೆ ಜಿಲ್ಲೆಯ ಜನರು ತತ್ತರಿಸಿದ್ದಾರೆ.
ಮಂಗಳೂರಿನಲ್ಲಿ ಗಾಳಿ ಸಹಿತ ಮಳೆ: ಆಗಾಗ ಬಿಡುವು ನೀಡಿ ಒಮ್ಮೆಲೇ ಗಾಳಿ ಸಹಿತ ಅಬ್ಬರಿಸುವ ಮಳೆಯಿಂದಾಗಿ ಉದ್ಯೋಗಕ್ಕೆ ತೆರಳುತ್ತಿದ್ದ ಜನರಿಗೆ ಕೊಂಚ ಕಿರಿ ಕಿರಿಯ ಅನುಭವವಾಯಿತು.
ಉಡುಪಿಯಲ್ಲಿ ಅಕಾಲಿಕ ಮಳೆಗೆ ತತ್ತರಿಸಿದ ರೈತರು: ಕರಾವಳಿ ಭಾಗದಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಭತ್ತದ ಕೃಷಿಯ ಫಸಲು ತೆಗೆಯುವ ಸಮಯ ಇದಾಗಿದ್ದು, ಅಕಾಲಿಕ ಮಳೆಯಿಂದಾಗಿ ಜನ ಆತಂಕಕ್ಕೊಳಗಾಗಿದ್ದಾರೆ. ಜಿಲ್ಲಾಡಳಿತ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದೆ.