ಕೊಡಗು/ದಕ್ಷಿಣ ಕನ್ನಡ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಅಬ್ಬರಿಸುತ್ತಿದೆ. ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ. ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆ ಕಂಡಿದೆ. ಧಾರಾಕಾರ ಮಳೆಯಿಂದಾಗಿ ರಸ್ತೆ ಮೇಲೆ 2 ಅಡಿಗೂ ಹೆಚ್ಚು ನೀರು ನಿಂತಿದ್ದು ಭಾಗಮಂಡಲ-ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಜನಜೀವನ ಅಸ್ಯವ್ಯಸ್ತವಾಗಿದ್ದು, ಜನರು ಸಂಚರಿಸಲು ಪರದಾಡುತ್ತಿದ್ದಾರೆ.
ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಬೋಟ್ ವ್ಯವಸ್ಥೆ ಮಾಡಿದೆ. ಭಾಗಮಂಡಲದಲ್ಲಿ ಒಂದು ತಿಂಗಳಿನಿಂದ ಗೃಹ ರಕ್ಷಕ ದಳದ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ವಾಹನಗಳು ನಿಂತಲ್ಲೇ ನಿಂತಿವೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನವರೆಗೂ ನೀರು ಏರಿಕೆಯಾಗಿದ್ದರಿಂದ ದೇವಸ್ಥಾನಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಭಾರಿ ಗಾಳಿ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ, ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಾವೇರಿ ನದಿ ನೀರಿನ ಮಟ್ಟ ಏರಿಕೆ : ಕಳೆದ ಕೆಲವು ದಿನಗಳಿಂದ ಬೆಂಬಿಡದೆ ಮಳೆ ಸುರಿಯುತ್ತಿರುವುದರಿಂದ ಕಾವೇರಿ ಮತ್ತು ಉಪನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹಾರಂಗಿ ಡ್ಯಾಂ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹಾರಂಡಿ ಡ್ಯಾಂನಿಂದ ಹೊರಹರಿವು ಹೆಚ್ಚಾದ ಕಾರಣ ಸೇತುವೆ ಮುಳುಗಡೆಯಾಗಿದೆ. ಹಾರಂಗಿ - ಯಡವನಾಡು ರಸ್ತೆ ಸಂಪರ್ಕ ಕಡಿತವಾಗಿದೆ.
ಇಂದು ಶಾಲಾ-ಕಾಲೇಜುಗಳಿಗೆ ರಜೆ : ವರುಣನ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೋಮವಾರ ರಜೆ ಘೋಷಿಸಿದ್ದಾರೆ. ಸೋಮವಾರ ಬೆಳಗ್ಗೆ 8.30ರ ವರೆಗೆ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡದಲ್ಲೂ ಮಳೆಯೋ ಮಳೆ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಭಾರಿ ಮಳೆಯು ಸುರಿಯುತ್ತಿದ್ದು, ಅಪಾಯದ ಭೀತಿ ಇರುವ ಹಿನ್ನೆಲೆಯಲ್ಲಿ ಸುಳ್ಯ ಕ್ಲಸ್ಟರ್‌ನ ಆಯ್ದ ಶಾಲೆಗಳಿಗೆ ಮತ್ತು ಕಡಬ ತಾಲೂಕಿನ ಎಲ್ಲ ಅಂಗನವಾಡಿ, ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ.
ಮಳೆ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಎಲ್ಲ ಅಂಗನವಾಡಿ, ಪ್ರೌಢಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಿ ಕಡಬ ತಹಶೀಲ್ದಾರ್ ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ. ಉಳಿದಂತೆ ತಾಲೂಕಿನ ಪಿಯು ಮತ್ತು ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿವೆ.
ಈಗಾಗಲೇ ಸುಬ್ರಹ್ಮಣ್ಯದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಎಸ್‌ಎಸ್‌ಪಿಯು, ಕುಮಾರಸ್ವಾಮಿ ವಿದ್ಯಾಲಯ, ವಾಲ್ಮೀಕಿ ಆಶ್ರಮ ಶಾಲೆ, ದೇವರಹಳ್ಳಿ, ನೇಲ್ಯಡ್ಕ ಮತ್ತು ಕುಲ್ಕುಂದದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹರಿಹರ ಕ್ಲಸ್ಟರ್‌ನ ಎಲ್ಲ ಶಾಲೆಗಳಿಗೆ ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಸುಬ್ರಹ್ಮಣ್ಯ ಗ್ರಾಮದಲ್ಲಿ ಇಂದು ಭಾರಿ ಮಳೆ ಆಗುತ್ತಿರುವುದರಿಂದ ಸುಬ್ರಹ್ಮಣ್ಯ ಅಂಗನವಾಡಿ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೂ ರಜೆ ಕೊಡಲಾಗಿದೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ: ವಿಡಿಯೋ
ರಾಜ್ಯಾದ್ಯಂತ ವ್ಯಾಪಕ ಮಳೆ.. ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದ 18 ಟಿಎಂಸಿ ನೀರು, ರೈತರಿಗೆ ಸಂತಸ