ಕೊಡಗು : ಜಿಲ್ಲೆಯ ಹಲವೆಡೆ ಪದೇ ಪದೆ ಭೂಮಿ ಕಂಪಿಸಿದ್ದು, ಈಗ ಆ ಭಾಗದಲ್ಲಿಯೇ ಮಳೆ ಹೆಚ್ಚಾಗಿದ್ದು, ಮುಂಗಾರಿನ ಅಬ್ಬರಕ್ಕೆ ಗಡಿ ಭಾಗದ ಜನರು ಆತಂಕದಲ್ಲಿ ಜೀವನ ಮಾಡುವಂತಾಗಿದೆ. ಬೆಟ್ಟದ ಮೇಲಿನ ಮಣ್ಣು ಕೂಡ ಕೆಲವು ಕಡೆ ರಸ್ತೆ ಮೇಲೆ ಬೀಳುತ್ತಿದ್ದು, ಅಗತ್ಯ ಬಿದ್ದರೆ ಜನರನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
ಭೂಮಿ ಕಂಪಿಸಿದ ಕೊಡಗು ಗಡಿಭಾಗ ಸಂಪಾಜೆ, ಚೆಂಬು ಗ್ರಾಮ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿದ್ದು, ಮಂಗಳೂರು ರಸ್ತೆಯ ಕರ್ತೋಜಿ ಗ್ರಾಮದ ಬಳಿ ಮಣ್ಣು ಕುಸಿತವಾಗಿದೆ. ಈ ಸ್ಥಳಗಳಿಗೆ ಕಂದಾಯ ಸಚಿವ ಆರ್. ಆಶೋಕ್ ಭೇಟಿ ನೀಡಿ ಪರಿಶೀಲಿಸಿದ್ದು, ಕೊಡಗು ಭೂಕಂಪನದಿಂದ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಸಣ್ಣ ಪ್ರಮಾಣದ ಭೂಕಂಪನವಷ್ಟೇ ಆಗುತ್ತಿದೆ. ಇದುವರೆಗೆ ಬಿರುಕು ಕೂಡ ಮೂಡಿಲ್ಲ, ಆತಂಕ ಬೇಡ ಎಂದು ಗ್ರಾಮಸ್ಥರಿಗೆ ಧೈರ್ಯ ಹೇಳಿದರು.
ಸರ್ಕಾರ ಭೂಕಂಪನವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು, ವಿಜ್ಞಾನಿಗಳು, ಹೈದರಾಬಾದ್ ಭೂಗರ್ಭ ಶಾಸ್ತ್ರಜ್ಞರು ಅಧ್ಯಯನ ಮಾಡುತ್ತಿದ್ದಾರೆ. ಬಿರುಕು ಮೂಡಿದರೆ ಅನಾಹುತ ಎಂಬುದು ತಿಳಿದುಬಂದಿದೆ. ನಾಳೆ ವಿಜ್ಞಾನಿಗಳು ವರದಿ ನೀಡುತ್ತಾರೆ. ಕೊಡಗಿನ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಅಶೋಕ್ ಹೇಳಿದರೂ, ಜನರು ಮಾತ್ರ ಆಕಂತಕದಲ್ಲೇ ದಿನ ದೂಡುತ್ತಿದ್ದಾರೆ.
ರಸ್ತೆ ಸಂಚಾರ ಸ್ಥಗಿತ : ರಾತ್ರಿಯಿಡೀ ಸುರಿಯುತ್ತಿರುವ ಮಳೆಗೆ ಮಡಿಕೇರಿಯಿಂದ ಸಿದ್ದಾಪುರಕ್ಕೆ ತೆರಳುವ ಮುಖ್ಯರಸ್ತೆಗೆ ಮಣ್ಣು ಬಿದ್ದಿದ್ದು, ರಸ್ತೆ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಸಿದ್ದಾಪುರಕ್ಕೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಲು ಜನರು ಪರದಾಡುತ್ತಿದ್ದಾರೆ. ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳ, ಮನೆಗಳ ಮೇಲೆ ಬೀಳುತ್ತಿದ್ದು, ಮಳೆ ಭಾರೀ ಅವಾಂತರ ಸೃಷ್ಟಿಸುತ್ತಿದೆ. ಕಾವೇರಿ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಇದನ್ನೂ ಓದಿ : ಭೂಕಂಪದ ಹಿನ್ನೆಲೆ ಕೊಡಗಿಗೆ ಭೇಟಿ ಕೊಟ್ಟ ಭೂ ವಿಜ್ಞಾನಿಗಳು