ಕೊಡಗು: ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆ ಜಲಾಶಯದಿಂದ 1200 ಕ್ಯೂಸೆಕ್ ನೀರನ್ನು ಶನಿವಾರ ನದಿಗೆ ಹರಿಯಬಿಡಲಾಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಹಾರಂಗಿ ಜಲಾಶಯ ಬಳಿ ಇರುವ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ಜಲಾಶಯದ ನಾಲ್ಕು ಕ್ರೆಸ್ಟ್ ಗೇಟ್ಗಳನ್ನು ತೆಗೆಯುವ ಮೂಲಕ ನೀರು ಹರಿಬಿಡಲಾಯಿತು.
ಬಳಿಕ ಮಾತನಾಡಿದ ಶಾಸಕ 2018 ಮತ್ತು 2019 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಜನರು ತುಂಬಾ ನೊಂದಿದ್ದಾರೆ. ಆ ರೀತಿಯ ಘಟನೆ ಮರುಕಳಿಸದಂತೆ ಆಗಲಿ, ಮಳೆಯೂ ಬರಲಿ ನಾಡಿನ ಜಲಾಶಯಗಳು ತುಂಬುವಂತಾಗಲಿ, ಕೃಷಿ ಚಟುವಟಿಕೆಗಳು ಕೂಡ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.
ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿಗೆ ಕೃಷಿ ಚಟುವಟಿಕೆಗಳು ಹಾಗೂ ಜನರಿಗೆ ಕುಡಿಯಲು ಸಮೃದ್ಧಿಯಾಗಿ ನೀರು ಸಿಗುವಂತಾಗಲಿ ಎಂದರು. ಕಳೆದ ಬಾರಿ ಜುಲೈ 16 ರಂದು ಜಲಾಶಯದಿಂದ ನೀರನ್ನು ನದಿಗೆ ಹರಿಯ ಬಿಡಲಾಗಿತ್ತು. ಈ ಬಾರಿ ಜಲಾಶಯ ತುಂಬಲು ಇನ್ನೂ 3 ಅಡಿ ಬಾಕಿ ಇರುವಾಗಲೇ ನೀರನ್ನು ಹರಿಯ ಬಿಡಲಾಗಿದೆ. ಇದರಿಂದ ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಮುನ್ನೆಚ್ಚರಿಕೆಯ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮುಂಗಾರು ಚುರುಕುಗೊಂಡಿದ್ದು, ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಇಂದು 1200 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ. ಜೊತೆಗೆ ಮಳೆಯಾಗುತ್ತಿರುವುದರಿಂದ ಒಳ ಹರಿವೂ ಹೆಚ್ಚಾಗಿದೆ. ಆದ್ದರಿಂದ ಎರಡು ವಾರ ಮುಂಚಿತವಾಗಿ ನದಿಗೆ ನೀರನ್ನು ಹರಿಯಬಿಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ವಿಶೇಷ ಪ್ಯಾಕೇಜ್ ಪ್ರಕಟಿಸಲು ಮನವಿ: ಕೊಡಗು ಜಿಲ್ಲೆಯ ಕಾವೇರಿ ನದಿಪಾತ್ರದಿಂದ ಸುಮಾರು 450 ಟಿಎಂಸಿ ನೀರು ಹರಿದು ಹೋಗುತ್ತಿದೆ. ಒಂದು ಟಿಎಂಸಿ ನೀರನ್ನು 25 ಸಾವಿರ ಎಕರೆ ಕೃಷಿ ಚಟುವಟಿಕೆಗೆ ಒದಗಿಸಬಹುದಾಗಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆ, ಸೇತುವೆ, ವಿದ್ಯುತ್ ಕಂಬಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿವೆ. ಆದ್ದರಿಂದ ಕೊಡಗು ಜಿಲ್ಲೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಎಂ.ಪಿ.ಅಪ್ಪಚ್ಚುರಂಜನ್ ಮನವಿ ಮಾಡಿಕೊಂಡರು.
ಸರ್ಕಾರದಿಂದ ನದಿಯಲ್ಲಿನ ಹೂಳು ತೆಗೆಯಲು 10ಕೋಟಿ ಬಿಡುಗಡೆಯಾಗಿದ್ದು, ನವೆಂಬರ್ ತಿಂಗಳ ನಂತರ ಕುಶಾಲನಗರದ ಸಾಯಿ, ಕುವೆಂಪು ಹಾಗೂ ಇತರೆ ಬಡಾವಣೆ ಸೇರಿದಂತೆ ಕಾವೇರಿ ನದಿ ಪಾತ್ರದಲ್ಲಿ ಹೂಳು ತೆಗೆಯಲಾಗುವುದು ಎಂದರು. ಇಂಜಿನಿಯರ್ಗಳಿಂದ ಪ್ರತಿದಿನ ಹಾರಂಗಿ ಜಲಾಶಯದ ಕುರಿತು ನೀರಿನ ಪ್ರಮಾಣ ಮತ್ತು ಹರಿವು ಬಗ್ಗೆ ಮಾಹಿತಿ ಪಡೆಯಾಲಾಗುತ್ತಿದೆ. ಈ ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಶಾಸಕರು ವಿವರಿಸಿದರು.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಬಿಜೆಪಿ ಕಾರ್ಯಕಾರಿಣಿ: ದಕ್ಷಿಣದತ್ತ ಕೇಸರಿ ಪಡೆ ಕಣ್ಣು