ಕೊಡಗು: ಕಾನೂನು ಚೌಕಟ್ಟಿನಡಿ ಶಿಷ್ಟಾಚಾರದ ಪ್ರಕಾರ ಏನೇನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು. ಪ್ರವಾಹ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮಕ್ಕೆ ಮಾಜಿ ಸಿಎಂರನ್ನು ಆಹ್ವಾನಿಸಬೇಕು ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಇತಿಹಾಸದಲ್ಲಿ ಎಲ್ಲವನ್ನೂ ನೋಡಿದ್ದೀರಿ. ರಾಜಕೀಯ ಇತಿಹಾಸದಲ್ಲಿ ನನಗೂ ಸಾಕಷ್ಟು ಅನುಭವವಿದೆ. ಜಿಲ್ಲಾಡಳಿತದ ಶಿಷ್ಟಾಚಾರದಂತೆ ಎಲ್ಲವನ್ನೂ ಮಾಡುತ್ತೇವೆ ಎಂದರು.
ಜಂಬೂರಿನಲ್ಲಿ ಸಂತ್ರಸ್ತರಿಗಾಗಿ ನಿರ್ಮಿಸಿರುವ ಮನೆಗಳು ಕಳಪೆ ಕಾಮಗಾರಿಯಿಂದ ಕೂಡಿವೆ ಎಂಬುವುದರ ಕುರಿತು ಪ್ರತಿಕ್ರಿಯಿಸಿ, ನಾನು ಮತ್ತೊಬ್ಬರನ್ನು ಮೆಚ್ಚಿಸಲು ಮಾತನಾಡಲ್ಲ. ಮನೆಗಳ ನಿರ್ಮಾಣದ ವೇಳೆ ನಾನೇ ಮಂತ್ರಿ ಆಗಿದ್ದೆ. ಎಲ್ಲೋ ಒಂದು ಕಳಪೆ ಆಗಿದ್ದ ಮಾತ್ರಕ್ಕೆ ಹೀಗೆ ಆರೋಪ ಮಾಡಲು ಸಾಧ್ಯವಿಲ್ಲ. ಸುಮಾರು 10 ಲಕ್ಷ ಮನೆಗಳನ್ನು ನನ್ನ ಅವಧಿಯಲ್ಲೂ ನಿರ್ಮಿಸಲಾಗಿದೆ. ಒಂದು ವೇಳೆ ತಾಂತ್ರಿಕವಾಗಿ ತಪ್ಪುಗಳಿದ್ದರೆ ಮಾಹಿತಿ ಕೊಡಿ. ಕಳಪೆ ಕಾಮಗಾರಿ ನಡೆದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.