ಕೊಡಗು : ಕೊರೊನಾ ಸಂಕಷ್ಟದ ಸಮಯದಲ್ಲಿ ತೀರಾ ತೊಂದರೆ ಅನುಭವಿಸುತ್ತಿರುವ ದಿನಗೂಲಿ ನೌಕರರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಸವಿತಾ ಸಮಾಜದವರಿಗೆ ಸರ್ಕಾರ ಘೋಷಿಸಿದ್ದ ಸಹಾಯಧನ ಮರೀಚಿಕೆಯಾಗಿದೆ.
ಸೋಂಕಿನ ತೀವ್ರತೆ ಅರಿತ ಸರ್ಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಸಂಪೂರ್ಣ ಲಾಕ್‌ಡೌನ್ ಮಾಡಿತು. ಆದರೆ, ಇದರಿಂದ ಕೂಲಿ ಕಾರ್ಮಿಕರು, ಕ್ಷೌರಿಕರು, ಆಟೋ ಹಾಗೂ ಟ್ಯಾಕ್ಸಿ ಚಾಲಕರು ಆರ್ಥಿಕವಾಗಿ ಕಂಗೆಡುವಂತಾಯಿತು. ಸರ್ಕಾರ ಕೆಲ ವರ್ಗಗಳ ಆರ್ಥಿಕ ಸುಧಾರಣೆಗೆಂದು ಸೇವಾ ಸಿಂಧು ಆನ್‌ಲೈನ್ ಅಪ್ಲಿಕೇಷನ್‌ನಲ್ಲಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಹೇಳಿತ್ತು. ಅದರಂತೆ ಸಾಕಷ್ಟು ಮಂದಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರು. ಆದರೆ, ಬೆರಳೆಣಿಕೆಯಷ್ಟು ಮಂದಿಗೆ ಬಿಟ್ಟರೆ ಹಲವರ ಖಾತೆಗೆ ಒಂದು ರೂ. ಕೂಡ ಬಂದಿಲ್ಲ. ಇಂತಹ ಸಂಕಷ್ಟದಲ್ಲಿ ಸರ್ಕಾರ ನುಡಿದಂತೆ ನಡೆದುಕೊಳ್ಳದೆ ಅಂಗೈಯಲ್ಲಿ ಆಕಾಶ ತೋರಿಸುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಹಲವು ದಿನಗಳ ಹಿಂದೆಯೇ ಸೇವಾ ಸಿಂಧು ಆನ್‌ಲೈನ್ ಅರ್ಜಿ ಹಾಕಿದ್ದೇವೆ. ಅರ್ಜಿ ಸಲ್ಲಿಸಿದ್ದೀರಾ ಎನ್ನುವುದಕ್ಕೆ ಮೊಬೈಲ್‌ಗೆ ಒಂದು ಒಟಿಪಿ ಬಂದಿದ್ದಷ್ಟೇ ಬಿಟ್ಟರೆ ಸರ್ಕಾರದ ಹಣ ಬಂದಿಲ್ಲ. ಕೊರೊನಾಕ್ಕೆ ಹೆದರಿ ಜನರೇ ಹೊರಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕೂಡ ಬಂದ್ ಆಗಿರುವುದರಿಂದ ನಗರ ವ್ಯಾಪ್ತಿಯ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಲು ಪ್ರವಾಸಿಗರೇ ಇಲ್ಲದೆ ಆಟೋ, ಟ್ಯ್ಯಾಕ್ಸಿಗಳಿಗೆ ಬಾಡಿಗೆ ದೊರಕುತ್ತಿಲ್ಲ. ಎರಡು ತಿಂಗಳಿಂದ ಪೆಟ್ರೋಲ್ ಬೆಲೆಯೂ ಏರುತ್ತಿದೆ. ಒಂದೆರಡು ಬಾಡಿಗೆಗೆ ದಿನವೆಲ್ಲ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಕುಟುಂಬದ ನಿರ್ವಹಣೆ, ಮನೆ ಬಾಡಿಗೆ ಕಟ್ಟುವುದು ಎಲ್ಲವೂ ಕಷ್ಟವಾಗಿದೆ ಎನ್ನುತ್ತಾರೆ ಆಟೋಚಾಲಕ ಉಸೇನ್.
ಬೆರಳೆಣಿಯಷ್ಟು ಫಲಾನುಭವಿಗಳಿಗೆ ಹಣ ತಲುಪಿಸಿದ ಸರ್ಕಾರ ನಿಜವಾಗಿಯೂ ಉಳಿದವರಿಗೆ ನೆರವು ನೀಡೋದನ್ನೇ ಮರೆತಂತಿದೆ. ಕಷ್ಟಕಾಲದಲ್ಲಿ ಹಣ ಕೈಸೇರಿದ್ರೆ ಮಾತ್ರ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ.