ಕೊಡಗು: ದೇಶದ ಮೂರು ರಕ್ಷಣಾ ಪಡೆಗಳ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರಿಗೆ ಕೊಡಗು ಜಿಲ್ಲೆ ಮೇಲೆ ಅಪಾರ ಗೌರವ ಹೊಂದಿದ್ದರು. ಜಿಲ್ಲೆಗೆ ನಾಲ್ಕು ಬಾರಿ ಭೇಟಿ ಕೊಟ್ಟಿರುವುದು ಕೊಡಗಿಗೆ ಹೆಮ್ಮೆಯ ವಿಷಯ.
ಕೊಡಗು ಜಿಲ್ಲೆ ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಸೈನಿಕರ ತವರು. ಹಲವಾರು ವೀರ ಯೋಧರನ್ನು ದೇಶಕ್ಕೆ ನೀಡಿದ ಹೆಗ್ಗಳಿಕೆ ಕೊಡಗು ಜಿಲ್ಲೆಗೆ ಸೇರುತ್ತೆ. ಈ ಅಭಿಮಾನದಿಂದ ಜನರಲ್ ಬಿಪಿನ್ ರಾವತ್ ಅವರು ಜಿಲ್ಲೆಗೆ ಭೇಟಿ ನೀಡಿದ್ದರು. ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿದ್ದಾಗ 2017ರಲ್ಲಿ ಪೋರ್ಸಸ್ ಗಾಲ್ಫ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಅಂದು ಭಾರತೀಯ ಸೇನೆಯ ಮುಖ್ಯಸ್ಥರಾಗಿದ ದಲ್ಬೀರ್ ಸಿಂಗ್ ಅವರೊಂದಿಗೆ ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಬಂದು ಕೆಲವು ಯುದ್ದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಕೊಡುವುದಾಗಿ ಹೇಳಿ ಅದರಂತೆ ರಾವತ್ ನಡೆದುಕೊಂಡಿದ್ದು ವಿಶೇಷವಾಗಿದೆ. ಇದಲ್ಲದೇ ವಿರಾಜಪೇಟೆಯಲ್ಲಿ ಜನರಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪ್ರತಿಮೆಗಳನ್ನು ಉದ್ಘಾಟನೆ ಮಾಡಿದ್ದರು.
ಇದೇ ವರ್ಷ ರಾಷ್ಟ್ರಪತಿ ರಾಮನಾಥ್ ಗೋವಿಂದ್ ಅವರೊಂದಿಗೆ ಬಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆ ಮಾಡಿದ್ದು ಮರೆಯಲಾಗದ ಕ್ಷಣ ಎನ್ನುತ್ತಾರೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಸಿ ನಂದ ಅವರು.
'ಕೊಡಗಿನ ಪೀಚೆ ಕತ್ತಿ ನೀಡಿದ್ದೆ':
ಬಿಪಿನ್ ರಾವತ್ ಅವರು ಕೊಡಗಿಗೆ ಬಂದಾಗ ಕೊಡಗಿನ ಸಂಪ್ರದಾಯದಂತೆ ಕೊಡಗಿನ ಪೀಚೆ ಕತ್ತಿಯನ್ನು ಕೊಡಗುಯಾಗಿ ನೀಡಿದ್ದೆ ಎಂದು ರಾವತ್ ಅವರ ಸಮಕಾಲೀನರಾದ ಬಿಸಿ ನಂದ ಅವರು ಸ್ಮರಿಸಿದ್ದಾರೆ.
ಕೊನೆಯ ಬಾರಿಗೆ ಮ್ಯೂಸಿಯಂಗೆ ಬಂದಿದ್ದ ವೇಳೆ ಅವರ ನೆನೆಪಿಗಾಗಿ ಸಹಿ ಹಾಕಿ ಹೋಗಿದ್ರು. ಈಗ ಅವರ ಸಹಿ ನೋಡಿದ್ರೆ ಬೇಸರವಾಗುತ್ತೆ. ಅವರು ಮ್ಯೂಸಿಯಂಗೆ ಕೊಟ್ಟಿರುವ ಯುದ್ದದ ವಸ್ತಗಳನ್ನು ಜನರು ನೋಡಿ ಖುಷಿಪಡುತ್ತಿದ್ದಾರೆ. ಕೊಡಗಿಗೂ ರಾವತ್ ಅವರಿಗೂ ಅವಿನಾಭಾವ ಸಂಬಂಧ ಇತ್ತು. ಅವರ ಸಹಕಾರದಿಂದಲೇ ಕೊಡಗು ಸೇನಾ ಮ್ಯೂಸಿಯಂಗೆ ಕಳೆ ಬಂದಿದೆ. ಈ ಎಲ್ಲಾ ವಸ್ತುಗಳು ರಾವತ್ ಅವರ ಕೊಡಗುಯಾಗಿದೆ ಎಂದು ಲೆ.ಜ.ಬಿಸಿ ನಂದ ಅವರು ನೆನಪಿಸಿಕೊಂಡರು.
ಮಾಜಿ ಸೈನಿಕರ ಸಂಘದಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿಂದು ಪುಷ್ಪನಮನ ಸಲ್ಲಿಸುವ ಮೂಲಕ ಬಿಪಿನ್ ರಾವತ್ ಅವರಿಗೆ ಗೌರವ ಅರ್ಪಿಸಿದ್ದಾರೆ. ಯುದ್ದ ವಿಮಾನ ಅಷ್ಟು ಸುಲಭವಾಗಿ ಪತನ ಆಗುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ದುರಂತ: ಮೃತ ಲೆ.ಕ.ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ..ಪತ್ನಿಯ ಊರಿನಲ್ಲಿ ಮಡುಗಟ್ಟಿದ ಶೋಕ