ಕೊಡಗು: ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಯ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರ ಮೂಲ ನೆಲೆಯನ್ನು ಸಕ್ರಮಗೊಳಿಸಲಾಗುತ್ತಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ನಿರಾಶ್ರಿತರಾದ ಕುಟುಂಬಗಳ ಪೈಕಿ ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಸಂತ್ರಸ್ತರಿಂದ ವಾಸಸ್ಥಳದ ಹಕ್ಕು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ನೆಲ್ಯಹುದಿಕೇರಿಯ ನಿರಾಶ್ರಿತ ಕೇಂದ್ರದಲ್ಲಿ ಕಂದಾಯ ಇಲಾಖೆಯಿಂದ ಪ್ರಮಾಣ ಪತ್ರ ಪಡೆದು ಸರ್ಕಾರದಿಂದ 1 ಲಕ್ಷ ರೂ.ಪರಿಹಾರ ಪಾವತಿಸಲು ಕ್ರಮ ವಹಿಸಲಾಗಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಮುದ್ರಣ ಮಾಧ್ಯಮದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾವು ನಿರಾಶ್ರಿತರ ಕೇಂದ್ರದಿಂದ ಯಾರನ್ನೂ ಎತ್ತಂಗಡಿ ಮಾಡಿಲ್ಲ. ಸಾಮಾಜಿಕ ಜಾಲ ತಾಣದಲ್ಲಿನ ವೈರಲ್ ಆಗಿರುವ ಸುದ್ದಿ ಸುಳ್ಳು. ನಾವು ಬಲವಂತದಿಂದ ಪತ್ರಕ್ಕೆ ಸಹಿ ಮಾಡಿಸಿಕೊಂಡಿಲ್ಲ. ಶಾಶ್ವತ ಪರಿಹಾರ ಕೊಡುವ ಉದ್ದೇಶದಲ್ಲಿ ನಾವಿದ್ದೇವೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಕಾರ್ಯ ಮಾಡುತ್ತಿದೆ. ನಿರಾಶ್ರಿತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ.